ಬಾಳೂರಿನ ನೂತನ ದೇವಾಲಯ ಲೋಕಾರ್ಪಣೆ: ಸ್ಮರಣ ಸಂಚಿಕೆ ಬಿಡುಗಡೆ: ಗೌರವ ಸಮರ್ಪಣೆ
ಸಿದ್ದಾಪುರ: ಕುಟುಂಬ ವ್ಯವಸ್ಥೆ ಹಾಳಾದರೆ ಅದು ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ, ಧರ್ಮಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಹದಗೆಡುತ್ತಿದೆ. ಇದರಿಂದ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನಲ್ಲಿ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನೆ ಆಯೋಜಿಸಿದ್ದ ಧರ್ಮಸಭೆಯ ದಿವ್ಯಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದಿನನಿತ್ಯ ಪೂಜಾ ಕಾರ್ಯಗಳು ದೇವಸ್ಥಾನಗಳಲ್ಲಿ ನಡೆಯಬೇಕು. ಇಲ್ಲದಿದ್ದರೆ ಎಲ್ಲಾ ದೇವಸ್ಥಾನಗಳು ಸರ್ಕಾರದ ಪಾಲಾಗುತ್ತವೆ. ದೇವಸ್ಥಾನವನ್ನು ಕಟ್ಟುವುದು ಎಷ್ಟು ಕಷ್ಟವೋ ಅದನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಪ್ರಾಚೀನ ಇತಿಹಾಸ ಇರುವ ಬಾಳೂರಿನ ಮಲ್ಲಿಕಾರ್ಜುನ ದೇವಸ್ಥಾನ ಮುಂದಿನ ದಿನದಲ್ಲಿ ಧರ್ಮ ಹಾಗೂ ಧಾರ್ಮಿಕ ಕ್ಷೇತ್ರವಾಗುವ ಎಲ್ಲ ಲಕ್ಷಣಗಳಿವೆ ಎಂದರು. ಹಿರಿಯರು ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡಬೇಕು.
ಶಂಕರಾಚಾರ್ಯರು ಶ್ರೀಶೈಲ ಕ್ಷೇತ್ರದಲ್ಲಿ ಶಿವ ಲಹರಿಯನ್ನು ಬರೆದಿದ್ದಾರೆ. ಶಂಕರಾಚಾರ್ಯರ ಶ್ಲೋಕಗಳು ಇಲ್ಲಿ ನಿರಂತರವಾಗಿ ನಡೆಯುವಂತಾಗಬೇಕು. ಭಾರತದ ಮೇಲೆ ಅಸಂಘಟಿತ ಸಂಘಟನೆಗಳಿಂದ ಯುದ್ಧ ನಡೆಯುತ್ತಿದೆ. ಆದ್ದರಿಂದ ನಾವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಜಾಗೃತರಾಗಬೇಕಾಗಿದ್ದು, ಪ್ರತಿಯೊಬ್ಬರೂ ಇದಕ್ಕಾಗಿ ಸಹಕರಿಸಲು ಕರೆ ನೀಡಿದರು.
ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಜೀವನ ಸಾರ್ಥಕವಾಗಬೇಕಾದರೆ ದಾನ ಮತ್ತು ಶಿವ ಭಜನೆ ಮಾಡಬೇಕು. ದೇವಸ್ಥಾನಕ್ಕೆ ಹೋಗುವಾಗ ನಮ್ಮಲ್ಲಿನ ಅಹಂಕಾರ ದೂರ ಇಡಬೇಕು. ಜೊತೆಗೆ ರಾಜಕೀಯವನ್ನು ಮಾಡಬಾರದು. ಇತ್ತೀಚಿನ ದಿನದಲ್ಲಿ ಎಲ್ಲ ಮನೆಗಳಲ್ಲಿ ಭಜನೆಗಳು ಕಡಿಮೆಯಾಗುತ್ತಿದ್ದು ಧಾರವಾಹಿಗಳತ್ತ ಜನರು ಮುಖ ಮಾಡಿದ್ದಾರೆ. ಪ್ರತಿ ಮನೆಯಲ್ಲಿ ಭಜನೆ ಮಾಡುವುದರೊಂದಿಗೆ ವಾರಕ್ಕೆ ಒಮ್ಮೆಯಾದರೂ ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ ಸೇವೆ ಸಲ್ಲಿಸಿ ಭಜನೆ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಯತಿದ್ವಯರು ಶಿವಾರ್ಪಣಂ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ದೇವಾಲಯ ನಿರ್ಮಿಸಿದ ಡಾ.ಮನು ಹೆಗಡೆ, ದೇವಸ್ಥಾನದ ಅರ್ಚಕ ಸುಬ್ರಾಯ ಭಟ್ಟ ಬಾಳೂರು, ಪುರೋಹಿತರಾದ ವೆಂಕಟ್ರಮಣ ಭಟ್ಟ ಹಾಗೂ ಮತ್ತಿತರರನ್ನು ಶ್ರೀಗಳು ಗೌರವಿಸಿದರು.
ಶಂಕರ ಭಟ್ಟ ಮಸ್ಗುತ್ತಿ, ವಿ.ಎನ್.ಹೆಗಡೆ ಬೊಮ್ನಳ್ಳಿ, ಪ್ರದೀಪ ಹೆಗಡೆ ಕರ್ಜಗಿ, ಗೋಪಾಲಕೃಷ್ಣ ವೈದ್ಯ, ವಿ.ಡಿ.ಭಟ್ಟ ಊರತೋಟ, ಅನಂತಮೂರ್ತಿ ಹೆಗಡೆ, ಜಿ.ವಿ.ಹೆಗಡೆ ಕಾನಗೋಡ, ಜಿ.ಎಂ.ಹೆಗಡೆ ಹೆಗ್ನೂರು, ಎಸ್.ಎಂ.ಹೆಗಡೆ ಬಣಗಿ, ಎಸ್.ಎಸ್.ಭಟ್ಟ ಮಸ್ಗುತ್ತಿ, ಜಿ.ಎಂ.ಹೆಗಡೆ ಚಿಟಮಾಂವ ಹಾಗೂ ಆಡಳಿತ ಮಂಡಳಿ ಸದಸ್ಯರು, ಬಾಳೂರು ಸೀಮಾ ಪರಿಷತ್‌ನ ಸದಸ್ಯರುಗಳು ಉಪಸ್ಥಿತರಿದ್ದರು. ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಭಟ್ಟ ಊರತೋಟ, ಉಪಾಧ್ಯಕ್ಷ ವಿ.ಎಸ್.ಭಟ್ಟ ಮಸ್ಗುತ್ತಿ, ಕಾರ್ಯದರ್ಶಿ ರಾಮಚಂದ್ರ ಹೆಗಡೆ ಹೊಸ್ಮನೆ, ಐ.ಎಸ್.ಭಟ್ಟ ಹಸರಗೋಡ, ಪ್ರಭಾಕರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.