ಸಿದ್ದಾಪುರ: ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಚಂಡಿಕಾ ಹೋಮ, ಮಹಾರುದ್ರ ಪಾರಾಯಣ, ಮತ್ತಿತರ ಧಾರ್ಮಿಕ ಕಾರ್ಯಕ್ರಮ ಹಾಗೂ ಮಾತೆಯರಿಂದ ಕುಂಕುಮಾರ್ಚನೆ ಜರುಗಿತು.
ಚಂಡಿಕಾ ಹೋಮ ಹಾಗೂ ಮಹಾರುದ್ರ ಪಾರಾಯಣವು 125ಕ್ಕೂ ಹೆಚ್ಚು ವೈದಿಕರಿಂದ ಶಿಸ್ತು-ಬದ್ಧವಾಗಿ ನಡೆಯಿತು. ಅದರಂತೆ ನೂರಕ್ಕೂ ಹೆಚ್ಚು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ವಿಶೇಷ ಪೂಜೆ ಹಾಗೂ ಪ್ರಸಾದ ಭೋಜನದಲ್ಲಿ ನಾಲ್ಕುನೂರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಮೂರುದಿನಗಳ ಕಾಲ ನಡೆಯುವ ಕಾರ್ಯಕ್ರಮದ ವ್ಯವಸ್ಥೆಯನ್ನು ನೋಡಿ ಮೆಚ್ಚುಗೆವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಬಾಳೂರು ಸೀಮೆಯ ಭಕ್ತರು,ಪುರೋಹಿತರು, ಅರ್ಚಕರು, ಉಪಸ್ಥಿತರಿದ್ದರು.