ಸಿದ್ದಾಪುರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪೋಡಿ ಮುಕ್ತ ಗ್ರಾಮ ಅಭಿಯಾನವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಮಂಗಳವಾರ ನಮೂನೆ 1 ರಿಂದ 5ರ ಪ್ರಕರಣದಲ್ಲಿ (ಭೂ ಮಂಜೂರಾತಿ) ಫಲಾನುಭವಿಗಳಿಗೆ ಪೋಡಿ ದುರಸ್ತಿಯಾದ ಪಹಣಿ ಹಾಗೂ ಸರ್ವೆ ನಕಾಶೆ ವಿತರಿಸಿದರು.
ಗ್ರಾಮೀಣ ಭಾಗದಲ್ಲಿ ದಶಕದಿಂದ ನನೆಗುದಿಗೆ ಬಿದ್ದಿರುವ ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ವಿಶೇಷ ಮುತುವರ್ಜಿಯಿಂದ ಕಂದಾಯ ಇಲಾಖೆ ಪೋಡಿ ಮುಕ್ತ ಗ್ರಾಮ ಅಭಿಯಾನ ಆರಂಭಿಸಿದೆ. ಅರ್ಜಿ ಸಲ್ಲಿಸದಿದ್ದರೂ ಗ್ರಾಮಗಳ ಎಲ್ಲ ಆಸ್ತಿಗಳ ಭೂ ಮಾಪನ ಮಾಡಿ ಪೋಡಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಶಾಸಕರಾದ ಭೀಮಣ್ಣ ನಾಯ್ಕ ಮಂಗಳವಾರ ತಾಲೂಕಿನ 20 ಫಲಾನುಭವಿಗಳಿಗೆ ಪೋಡಿ ದುರಸ್ತಿ ಪಹಣಿ ಹಾಗೂ ಸರ್ವೆ ನಕಾಶೆ ವಿತರಿಸಿ ತಾಲೂಕಾ ಆಡಳಿತದ ಕಾರ್ಯವನ್ನು ಶ್ಲಾಘಿಸಿ ಪೋಡಿ ಮುಕ್ತ ಗ್ರಾಮವನ್ನು ಇದೇ ರೀತಿ ಅನುಷ್ಠಾನಗೊಳಿಸಿ ಸಿದ್ದಾಪುರ ತಾಲೂಕನ್ನು ಪೋಡಿ ಮುಕ್ತ ತಾಲೂಕಾಗಿ ಪರಿವರ್ತಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ಸಿಪಿಐ ಜೆ.ಬಿ.ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.