ಶಿರಸಿ: ಇಲ್ಲಿನ ಪ್ರತಿಷ್ಠಿತ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ. ವತಿಯಿಂದ ಜ. 28 ಹಾಗೂ ಜ.29ರಂದು ಕಾಳುಮೆಣಸಿನ ಹಬ್ಬ -2025ವನ್ನು ಶಿರಸಿಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರಾಂಗಣದಲ್ಲಿ (ಎಪಿಎಂಸಿ ಆವರಣ) ಇರುವ ಕದಂಬ ಆರ್ಗ್ಯಾನಿಕ್ ಪಾಯಿಂಟ್ ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜ.28, ಮಂಗಳವಾರದಂದು ಬೆಳಿಗ್ಗೆ 10.30ಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರದರ್ಶಿನಿ ಉದ್ಘಾಟನೆಯನ್ನು ತೋಟಗಾರಿಕಾ ವಿ.ವಿ. ಬಾಗಲಕೋಟ ಇದರ ಉಪಕುಲಪತಿಗಳಾದ ಡಾ.ವಿಷ್ಣುವರ್ಧನ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾ.ಕೃ.ಅ.ಪ. ಅಖಿಲ ಭಾರತೀಯ ಸಂಬಾರು ಬೆಳೆಗಳ ಸಮನ್ವಯ ಸಂಶೋಧನಾ ಯೋಜನೆ, ಕೋಝಿಕ್ಕೋಡ ಇದರ ಯೋಜನಾ ಸಂಯೋಜಕ ಡಾ. ಪ್ರಸಾದ್ ಡಿ., ಭಾರತೀಯ ಸಂಬಾರು ಬೆಳೆಗಳ ಸಂಶೋಧನಾ ಕೇಂದ್ರ, ಅಪ್ಪಂಗಳದ ಮುಖ್ಯಸ್ಥ ಡಾ. ಅಂಕೇ ಗೌಡರು, ತೋಟಗಾರಿಕಾ ವಿ.ವಿ. ಬಾಗಲಕೋಟ ಇದರ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ.ಲಕ್ಷ್ಮೀನಾರಾಯಣ ಹೆಗಡೆ, ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಎಂ.ಸೆಂಥಿಲ್ ಕುಮಾರ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ ಸತೀಶ ಬಿ.ಪಿ., ಶಿರಸಿಯ ತೋಟಗಾರ್ಸ್ ಸೇಲ್ಸ್ ಸೊಸೈಟಿಯ ಉಪಾಧ್ಯಕ್ಷರಾಗಿರುವ ಎಂ.ಎನ್.ಭಟ್ಟ ತೋಟಿಮನೆ, ಶಿರಸಿಯ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಉಪಾಧ್ಯಕ್ಷರಾಗಿರುವ ಜಿ.ಎಂ.ಹೆಗಡೆ ಮುಳಖಂಡ, ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ರೂಪಾ ಪಾಟೀಲ, ಪ್ರಗತಿಪರ ಕೃಷಿಕರಾದ ಸೀತಾರಾಮ ಹೆಗಡೆ ನೀರ್ನಳ್ಳಿ, ರಾಮಚಂದ್ರ ಹೆಗಡೆ ಗಡಿಕೈ ಭಾಗವಹಿಸಲಿದ್ದಾರೆ. ಪರಿಸರ ಅಂಕಣಕಾರ ಶಿವಾನಂದ ಕಳವೆ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ಕುರಿತು ಕಿರುಪರಿಚಯ ಮಾಡಿಕೊಡಲಿದ್ದಾರೆ.
ಮಧ್ಯಾಹ್ನ 3.30ರಿಂದ ಕಾಳುಮೆಣಸಿನ ಸಮೃದ್ಧಿಯ ಸುಗ್ಗಿ – ರೈತರ ಯಶೋಗಾಥೆ ಕುರಿತ ತಾಂತ್ರಿಕ ಗೋಷ್ಠಿ ನಡೆಯಲಿದ್ದು ಕೃಷಿ ವಿಜ್ಞಾನಿ ಡಾ. ವಿಜಯೇಂದ್ರ ಹೆಗಡೆ ಶಿಂಗನಮನೆಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಕಾಳುಮೆಣಸಿನ ಕೃಷಿಕ ಶ್ರೀಧರ ಭಟ್ಟ ಚವತ್ತಿ, ಅಂತರರಾಷ್ಟ್ರೀಯ ಕಾಳುಮೆಣಸಿನ ಸಮುದಾಯದಿಂದ ಪುರಸ್ಕೃತರಾದ ಜೋಮಿ ಮ್ಯಾಥಿವ್ ಶಿವಮೊಗ್ಗ, ಮತ್ತು ಅಮಾನುಲ್ಲಾ ಖಾನ್ ಸಾಗರ, ಶಿರಸಿಯ ತೋಟಗಾರಿಕಾ ಸಂಶೋಧನಾ ವಿಸ್ತರಣಾ ಘಟಕದ ಮುಖ್ಯಸ್ಥ ಡಾ ಕಿರಣ್ ಕುಮಾರ್ ಎ.ಸಿ., ಭಾಗವಹಿಸಲಿದ್ದಾರೆ. ಕೃಷಿ ತಜ್ಞ ಕಿಶೋರ ಹೆಗಡೆ ಬೆಳ್ಳೆಕೇರಿ (ಟಿಎಂಎಸ್ ಶಿರಸಿ) ಪ್ರಾಸ್ತಾವಿಕ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
ಜ. 29 ರಂದು ಬೆಳಿಗ್ಗೆ 10.30 ರಿಂದ ಯಲ್ಲಾಪುರ ತಾಲೂಕು ಚವತ್ತಿಯ ಸುಧೀರ ಬಲ್ಸೆ ಇವರ ಕಾಳುಮೆಣಸಿನ ತೋಟ ಕ್ಷೇತ್ರ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದ್ದು ವಿಶ್ರಾಂತ ವಿಜ್ಞಾನಿ ಡಾ.ಎಂ.ಎನ್.ವೇಣುಗೋಪಾಲ ಮೈಸೂರು ರವರ ಅಧ್ಯಕ್ಷತೆಯಲ್ಲಿ ಆರ್ಥಿಕ ಸ್ವಾತಂತ್ರ್ಯಕ್ಕೆ ಕಾಳುಮೆಣಸು & ಕಾಫಿ ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಮಾಲೋಚನೆ ನಡೆಯಲಿದೆ. ಡಾ ವಿಜಯೇಂದ್ರ ಹೆಗಡೆ ಶಿಂಗನಮನೆ, ಡಾ ಕಿರಣ್ ಕುಮಾರ್ ಎ.ಸಿ., ಡಾ ರೂಪಾ ಪಾಟೀಲ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
2005ರಲ್ಲಿ ಪ್ರಾರಂಭಿಸಲ್ಪಟ್ಟ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಶಿರಸಿ ಭಾಗದ ಕೃಷಿಕರ ಅಸಾಂಪ್ರದಾಯಿಕ ಸಂಬಾರ ಬೆಳೆಗಳು, ಕಿರು ಅರಣ್ಯ ಉತ್ಪನ್ನಗಳು ಹಾಗೂ ಮಹಿಳೆಯರು ಹಾಗೂ ಉದ್ಯಮಶೀಲ ವ್ಯಕ್ತಿಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಯಶಸ್ವಿ ಪ್ರಯತ್ನ ನಡೆಸುತ್ತ ಬಂದಿದೆ. ಪ್ರಸಕ್ತ ಕದಂಬದ ಕಾಳುಮೆಣಸಿನ ವಹಿವಾಟು ಸುಮಾರು 4500 ಕ್ವಿಂಟಲ್‌ಗಿಂತ ಅಧಿಕವಾಗಿದೆ. ಕಾಳುಮೆಣಸಿನ ಪುನರುಜ್ಜೀವನ ಹಾಗೂ ಅದರ ವೈವಿಧ್ಯಮಯ ತಳಿಗಳ ಸಂರಕ್ಷಣೆಗೆ ನಿಸ್ಪೃಹ ಸೇವೆ ಸಲ್ಲಿಸಿರುವ ಡಾ.ಎಂ.ಎನ್.ವೇಣುಗೋಪಾಲ ಮೈಸೂರು, ಡಾ.ವಿಜಯೇಂದ್ರ ಹೆಗಡೆ ಶಿಂಗನಮನೆ, ಡಾ.ಕಿಶೋರ ಹೆಗಡೆ ಬೆಳ್ಳೆಕೇರಿ ಮುಂತಾದ ವಿಜ್ಞಾನಿಗಳು ಮತ್ತು ತಜ್ಞರು ಹಾಗೂ ಇನ್ನೂ ಹಲವರ ಪ್ರಯತ್ನದಿಂದ ಇಂದು ನಮ್ಮ ರಾಜ್ಯ ಕಾಳುಮೆಣಸಿನ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ.
ಆದರೆ ಕೃಷಿಕರು ಉತ್ಪಾದಿಸುವ ಕಾಳುಮೆಣಸಿನ ಗುಣಮಟ್ಟ ಹಾಗೂ ವಿಧಗಳಿಗೆ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಿಧಗಳಿಗೆ ಬಹಳ ಅಂತರವಿದೆ. ನಿರ್ಯಾತ ಮಾಡಲು, ಹೊಟೇಲುಗಳಿಗೆ, ಔಷಧ ಕಂಪನಿಗಳಿಗೆ ಹಾಗೂ ಶ್ರೀಸಾಮಾನ್ಯರಿಗೆ ಅಗತ್ಯವಿರುವ ಕಾಳುಮೆಣಸಿನ ವಿಧಗಳಲ್ಲಿ ಪ್ರತ್ಯೇಕತೆ ಇದೆ. ಈ ಅಂತರವನ್ನು ಸರಿದೂಗಿಸಲು ಕಾಳುಮೆಣಸನ್ನು ವಿಶಿಷ್ಠವಾಗಿ ವಿನ್ಯಾಸಗೊಳಿಸುವ (ಬ್ರ್ಯಾಂಡಿಂಗ್) ಅವಶ್ಯಕತೆ ಇದೆ.
ಅದಲ್ಲದೇ, ಅಧಿಕ ಇಳುವರಿ ನೀಡುವ ಪಣಿಯೂರು ತಳಿ ಕೇರಳದಿಂದ ನಮ್ಮ ಭಾಗಕ್ಕೆ ಬಂದ ನಂತರ ಮಲ್ಲೀಸರ, ಸಿಗಂದಿನಿ, ಕೆರೆಗದ್ದೆ, ಮುಂತಾದ ಸ್ಥಾನಿಕ ತಳಿಗಳು ಕಣ್ಮರೆಯಾಗಲು ಪ್ರಾರಂಭವಾದವು. ವಿಶಿಷ್ಟ ಸುಗಂಧ, ತೈಲದ ಅಂಶ ಹಾಗೂ ಗಾತ್ರ ಹೊಂದಿರುವ ಇಂತಹ ಸ್ಥಾನಿಕ ತಳಿಗಳ ಸಂರಕ್ಷಣೆ ಕೂಡ ಅತ್ಯಂತ ಮಹತ್ವದ್ದಾಗಿದೆ.
ಕಾಳುಮೆಣಸಿನ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕಾಗಿ ಆಯೋಜನೆ:
1) ಕಾಳುಮೆಣಸಿನ ಕೃಷಿಯನ್ನು ಅತ್ಯಂತ ಶ್ರದ್ಧೆಯಿಂದ, ಇತರರಿಗೆ ಮಾದರಿಯಾಗಿ ನಡೆಸುತ್ತಿರುವ 35 ವರ್ಷದ ಒಳಗಿನ ಆಯ್ಕೆಮಾಡಿರುವ ಯುವ ಕೃಷಿಕರಿಗೆ ರಾಣಿ ಚೆನ್ನಭೈರಾದೇವಿ ಪುರಸ್ಕಾರ
2) ವಿವಿಧ ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ, ಅಂತರರಾಷ್ಟ್ರೀಯ ನಿರ್ಯಾತಕ್ಕೆ ಪೂರಕವಾಗಿ, ಗುಣಮಟ್ಟದ 5 ಕೆಜಿ, 10 ಕೆಜಿ, 30 ಕೆಜಿಯ ಕಾಳುಮೆಣಸಿನ ಬ್ರ್ಯಾಂಡ್ ಬಿಡುಗಡೆ
3) ಮಹಿಳೆಯರಿಗಾಗಿ ವಿಶೇಷವಾಗಿ ಕಾಳುಮೆಣಸನ್ನು ಆಧರಿಸಿರುವ ಖಾದ್ಯಗಳ ಸ್ಫರ್ಧೆ
4) ನಮ್ಮ ಭಾಗದಲ್ಲಿ ಪ್ರಚಲಿತವಾಗಿದ್ದ ಆದರೆ ಇಂದು ಮೂಲೆಗುಂಪಾಗುತ್ತಿರುವ ಮಲ್ಲೀಸರ, ಕರಿಮುಂಡ, ಮುಂತಾದ ತಳಿಗಳನ್ನು ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ 100ಕ್ಕಿಂತ ಹೆಚ್ಚು ಕಾಳುಮೆಣಸಿನ ತಳಿಗಳ ಸಸಿಗಳು ಹಾಗೂ ಒಣಗಿಸಲ್ಪಟ್ಟಿರುವ ಕಾಳುಮೆಣಸಿನ ಪ್ರಬೇಧಗಳ ಪ್ರದರ್ಶನ
5) 7 ರಾಷ್ಟ್ರಗಳ ಅಂತರರಾಷ್ಟ್ರೀಯ ಕಾಳುಮೆಣಸು ಸಮುದಾಯ ಪ್ರತಿವರ್ಷ ಕೇವಲ ಒಬ್ಬರಿಗೆ ನೀಡುವ ಪುರಸ್ಕಾರಕ್ಕೆ ಪಾತ್ರರಾದ ನಮ್ಮ ರಾಜ್ಯದ ಯಶಸ್ವಿ ಕಾಳುಮೆಣಸಿನ ಕೃಷಿಕರ ಯಶೋಗಾಥೆ ಮತ್ತು ಅನುಭವ ವಿನಿಮಯ
6) ನಮ್ಮ ರಾಷ್ಟ್ರ ಐರೋಪ್ಯರ ಆಡಳಿತಕ್ಕೆ ಒಳಗಾಗಲು ಸಂಬಾರ ಬೆಳೆಗಳು ಕಾರಣ. 29 ಜನವರಿ 2025ರಂದು ನಮ್ಮ ಕೃಷಿಕರ ಆರ್ಥಿಕ ಸ್ವಾತಂತ್ರ್ಯಕ್ಕೆ ತಳಹದಿಯಾಗಬಲ್ಲ ಗುಣಮಟ್ಟದ ಕಾಳುಮೆಣಸು ಹಾಗೂ ಇನ್ನಿತರ ಸಂಬಾರ ಬೆಳೆಗಳು ಮತ್ತು ಇಂದು ನಮ್ಮ ಭಾಗದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಕಾಫಿ ಬೆಳೆಗಳ ಕುರಿತು ಯಲ್ಲಾಪುರ ತಾಲೂಕಿನ ಚವತ್ತಿಯಲ್ಲಿ ಸುಧೀರ ಬಲ್ಸೆ ಅವರ ತೋಟದಲ್ಲಿ ಕ್ಷೇತ್ರ ವೀಕ್ಷಣೆ ಮತ್ತು ತಜ್ಞರೊಡನೆ ಸಮಾಲೋಚನೆ.
7) ಇದೇ ಸಂದರ್ಭದಲ್ಲಿ, ನಮ್ಮ ಭಾಗದ ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ, ಕಾಳುಮೆಣಸಿನ ಕೃಷಿಗೆ ಪೂರಕವಾಗಿ ಬೆಳೆಯಲ್ಪಡುತ್ತಿರುವ ಕಾಫಿಯ ಹರಾಜು ಕೇಂದ್ರದ (Auction Centre) ಉದ್ಘಾಟನೆಯನ್ನೂ ಆಯೋಜಿಸಲಾಗಿದೆ.