ಕಾರವಾರ: ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರತಿನಿತ್ಯ ವಸ್ತುಗಳನ್ನು ಖರೀದಿಸುತಿದ್ದು, ಅವುಗಳ ಗುಣಮಟ್ಟ, ನ್ಯೂನತೆ, ವೆಚ್ಚಗಳ ಬಗ್ಗೆ ಗ್ರಾಹಕರು ಮಾಹಿತಿ ತಿಳಿದುಕೊಳ್ಳುವ ಮೂಲಕ ವಂಚನೆಗೆ ಒಳಗಾಗದೆ ಜಾಗೃತವಾಗಿರಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಹೇಳಿದರು.
ಅವರು ಮಂಗಳವಾರ ಕಾರವಾರದ ದಿವೇಕರ್ ವಾಣಿಜ್ಯ ಕಾಲೇಜು ಹಾಗೂ ಪಿ.ಜಿ ಕೇಂದ್ರ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಕಾರವಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಇಲಾಖೆ, ಕರ್ನಾಟಕ ಆಹಾರ ನಿಗಮ, ಹಾಗೂ ದಿವೇಕರ ವಾಣಿಜ್ಯ ಕಾಲೇಜು ಹಾಗೂ ಪಿ ಜಿ ಕೇಂದ್ರ ಕಾರವಾರ ರವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ಮಾರಾಟವಾಗುವ ಪ್ರತಿ ವಸ್ತು, ಸರಕು ಮತ್ತು ಸೇವೆಗಳ ಮೌಲ್ಯ, ವೆಚ್ಚ ಹಾಗೂ ಗುಣಮಟ್ಟದ, ಆರೋಗ್ಯಕರವಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಗ್ರಾಹಕರಿಗೆ ಸಿಗಬೇಕು. ವಂಚನೆಯನ್ನು ತಡೆಯಲು 1996 ರಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳನ್ನು ಜಾರಿಗೆ ತರಲಾಗಿದ್ದು, ಗ್ರಾಹಕರ ತಮ್ಮ ಹಕ್ಕುಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಗ್ರಾಹಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಉತ್ಪಾದಕರು ಹಾಗೂ ಮಾರಾಟ ಮಾಡುವವರು ತಮ್ಮ ಲಾಭಕ್ಕಾಗಿ ಕಳಬೆರಕೆ, ಕಳಪೆ ಗುಣಮಟ್ಟ, ನಕಲಿ ಹೆಸರುಗಳ ಮೂಲಕ ವಂಚನೆ ಮಾಡುತ್ತಿದ್ದಾರೆ ಇದರ ಬಗ್ಗೆ ಗ್ರಾಹಕರು ಜಾಗೃತರಾಗಬೇಕು. ಚಿತ್ರನಟರು ನೀಡುವ ಜಾಹಿರಾತುಗಳಿಗೆ ಮಾರು ಹೋಗದೆ ಅದು ವಸ್ತುಗಳು ತಮಗೆ ಸೂಕ್ತ ಎಂಬುದುದನ್ನು ಖಚಿತ ಪಡಿಸಿಕೊಂಡು ತಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿ ಮಾಡಿ, ಅದಕ್ಕೆ ಜಿಎಸ್ಟಿ ರಸೀದಿಯನ್ನು ಪಡೆದುಕೊಳ್ಳಿ ಇದರಿಂದ ತಮಗೂ ಹಾಗೂ ದೇಶದ ಸುವ್ಯವಸ್ಥಿತ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ ಬಮ್ಮನಕಟ್ಟಿ ಮಾತನಾಡಿ,
ವ್ಯಾಪಾರಂ ದ್ರೋಹ ಚಿಂತನಎನ್ನುವಂತೆ ವಸ್ತುಗಳ ನಕಲಿ ಹೆಸರು, ಕಳಪೆ ಗುಣಮಟ್ಟ, ವೆಚ್ಚ, ಬಣ್ಣ ಮಿಶ್ರಣ, ಇತರೆ ಕೆಮಿಕಲ್ ಬಳಕೆ ಮಾಡುವವರ ಮತ್ತು ತಪ್ಪು ಜಾಹಿರಾತು ನೀಡಿ ವಂಚನೆ ಮಾಡುವವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರ ನೀಡಬಹುದು ಅವರು ಪರೀಶಿಲಿಸಿ ದಂಡ ವಿಧಿಸುವ ವ್ಯವಸ್ಥೆ ಇದೆ ಎಂದ ಅವರು ವಸ್ತುಗಳ ಮೇಲೆರುವ ಕರಾರುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ ಅದರಿಂದ ಅನೇಕ ಉಪಯೋಗವಾಗಲಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಬಿ ನಾಯ್ಕ ಮಾತನಾಡಿ, ವಸ್ತುಗಳ ವಂಚನೆ, ಕಲಬೆರಕೆ ವಿರುದ್ಧ ದೂರು ನೀಡುವುದೊಂದಿಗೆ ಸೇವೆ ನೀಡುವುದರಲ್ಲಿ ನ್ಯೂನತೆ ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನಾತ್ಮಕವಾಗಿ ದೂರು ದಾಖಲಿಸಬಹುದು. ಪ್ರತಿಯೊಬ್ಬರು ಕೈ ಜೋಡಿಸಿದಾಗ ಮಾತ್ರ ಉತ್ತಮ, ಆರೋಗ್ಯಕರ ಆಹಾರ ವಸ್ತುಗಳನ್ನು ಖರೀದಿಸಲು ಸಾಧ್ಯ ಎಂದರು.
ನ್ಯಾಯವಾದಿ ವರದಾ ಡಿ ನಾಯ್ಕ Virual hearings and digital access to consumer justice ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ರೇವಣಕರ್, ದಿವೇಕರ್ ವಾಣಿಜ್ಯ ಕಾಲೇಜು ಮತ್ತು ಪಿ.ಜಿ ಕೇಂದ್ರದ ಪ್ರಾಂಶುಪಾಲ ಡಾ. ಕೇಶವ ಕೆ.ಜಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯಿ ನೈನಾ ಅಶೋಕ ಕಾಮಟೆ, ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಪ್ರಾಚಾರ್ಯರು, ಸಿಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.