ಯಲ್ಲಾಪುರ : ತಾಲೂಕಿನ ಮದನೂರು ಗ್ರಾ.ಪಂ.ದಲ್ಲಿ ಒಂದು ತಿಂಗಳ ಹಿಂದೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ ನಂತರ ಶುಕ್ರವಾರದಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ವಿಠ್ಠು ಬೊಮ್ಮು ಶೆಳಕೆ ಅಧ್ಯಕ್ಷರಾಗಿ, ಜನಾಬಾಯಿ ಖಂಡು ಬರಾಗಡೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಬಿಜೆಪಿಯ ರಾಜ್ಯವಕ್ತಾರ ಹರಿಪ್ರಕಾಶ ಕೋಣೇಮನೆ ಮಾಹಿತಿ ನೀಡಿದರು.
ಅವರು, ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇದು ಕಾರ್ಯಕರ್ತರ ಗೆಲುವು. ಈ ಪಂಚಾಯತ ಹಿಂದೂತ್ವದ ಬಿಜೆಪಿಯ ಗಟ್ಟಿನೆಲ ಎಂಬುದನ್ನು ರುಜುವಾತುಪಡಿಸಿದೆ. ೧೩ ಸದಸ್ಯರನ್ನು ಹೊಂದಿದ ಈ ಪಂಚಾಯತ ೧೦ ಬಿಜೆಪಿ, ೩ ಕಾಂಗ್ರೆಸ್ ಬೆಂಬಲಿಗರನ್ನು ಹೊಂದಿದೆ. ಆದರೂ ರಾಜಕೀಯ ವಿದ್ಯಮಾನದಿಂದ ಅನೇಕ ಸಂಘರ್ಷ, ಪಕ್ಷಾಂತರ ಪರ್ವ ನಡೆಸಲು ಆಸೆ, ಆಮಿಷ, ಬೆದರಿಕೆ, ಯಾವುದಕ್ಕೂ ಬಗ್ಗದೇ ರಾಷ್ಟ್ರೀಯತೆ ಹಿಂದುತ್ವದ ವಿಚಾರದಲ್ಲಿ ಗಟ್ಟಿಯಾಗಿ ನಿಂತು ಕಾಂಗ್ರೆಸ್ಸಿಗೆ ಅದರಲ್ಲೂ ಕ್ಷೇತ್ರದಲ್ಲಿ ಒಂದು ಉತ್ತಮ ಸಂದೇಶ ನೀಡಿದಂತಾಗಿದೆ. ಇಲ್ಲಿನ ಸದಸ್ಯರು ಪ್ರಮುಖ ಕಾರ್ಯಕರ್ತರು ಬಿಜೆಪಿ ಜೊತೆ ಹೇಗೆ ಗಟ್ಟಿಯಾಗಿ ನಿಂತಿದ್ದಾರೆ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ಒಂದು ತಿಂಗಳ ಹಿಂದೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲಾಗಿತ್ತು. ಅದಕ್ಕೆ ನ್ಯಾಯಾಲಯದ ಆದೇಶವನ್ನೂ ತರಲಾಯಿತು. ಆದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ಆರಿಸಿ ಬಂದ ಸದಸ್ಯರು ಗಟ್ಟಿಯಾಗಿ ನಿಂತಿದ್ದಾರೆ. ಇದುವೇ ಪಕ್ಷದ ಶಕ್ತಿ ಎನ್ನಬೇಕಾಗುತ್ತದೆ. ಎರಡೂವರೆ ತಿಂಗಳ ಹಿಂದಿನ ವಾತಾವರಣ ಗಮನಿಸಿದರೆ ತೀವೃ ನೋವಾಗುತ್ತದೆ. ಇವರ ಮೇಲೆ ಪ್ರಭಾವಿಗಳಿಂದ ಎಂತಹ ಒತ್ತಡ ಬಂದರೂ ಅವರು ಬಗ್ಗಲಿಲ್ಲ ಎನ್ನುವುದು ಪಕ್ಷದ ತತ್ವ, ಸಿದ್ಧಂತಕ್ಕೆ ಸಂದ ಜಯವಾಗಿದೆ ಎಂದರು.
ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಇದು ಕಾರ್ಯಕರ್ತರ ಒಗ್ಗಟ್ಟಿನ ಗೆಲುವು. ಪಕ್ಷಾಂತರಗಳಿಗೆ ಸ್ಪಷ್ಟ ಸಂದೇಶ ನೀಡಿದ ಗೆಲುವು. ಕಳೆದೆರಡು ವರ್ಷಗಳಿಂದ ಕಾರ್ಯಕರ್ತರು ತೀವ್ರ ಗೊಂದಲದಲ್ಲಿ ಸಿಲುಕಿದ್ದರು ಎಂದ ಅವರು, ನಮ್ಮ ತಾಲೂಕಿನಾದ್ಯಂತ ಇರುವ ೯೬ ಬೂತ್ಗಳಲ್ಲಿ ಪಕ್ಷದ ಸಂಘಟನೆ ಪ್ರತಿ ಹಂತದಲ್ಲಿ ಮಾಡುತ್ತಿದ್ದೇವೆ. ಮುಂಬರುವ ಚುನಾವಣೆಯನ್ನು ಸಮರ್ಥವಾಗಿ ನಾವು ಎದುರಿಸುತ್ತೇವೆ. ಎಂದರು.
ಹಿಂದುಳಿದ ವರ್ಗದ ಘಟಕಾಧ್ಯಕ್ಷ ವಿಠ್ಠಲ ಪಾಂಡು ಮಿಶ್ರೆ ಮಾತನಾಡಿ, ಈ ಗೆಲುವು ಐತಿಹಾಸಿಕ. ಕಿರವತ್ತಿ, ಮದನೂರು ಪ್ರದೇಶವೆಂದರೆ ಸಂಪೂರ್ಣ ಹಿಂದುಳಿದ ಗೌಳಿ, ಮರಾಠಿ ಜನರೇ ಹೆಚ್ಚಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಗೆದ್ದ ಸದಸ್ಯರ ಮೇಲೆ ಹಲ್ಲೆಯನ್ನೂ ಮಾಡಲಾಗಿತ್ತು. ನಮ್ಮ ಅನೇಕ ಸದಸ್ಯರಿಗೆ ಕಾಂಗ್ರೆಸ್ಸಿಗರು ಹಣದ ಆಮಿಷ ಒಡ್ಡಿದರೂ ಅದನ್ನು ತಿರಸ್ಕಾರ ಮಾಡಿದ್ದಾರೆ. ನಮ್ಮಲ್ಲಿಯ ಸಂಘಟನೆಯನ್ನು ಮುರಿದು ಒಳಜಗಳ ಹಚ್ಚಿ ಸಮಸ್ಯೆ ಬೆಳೆಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಗಿದೆ. ಆದರೂ ನಾವೆಲ್ಲ ಗಟ್ಟಿಯಾಗಿ ನಿಂತಿದ್ದೇವೆ ಎಂದರು.
ತಹಶೀಲ್ದಾರ ಯಲ್ಲಪ್ಪ ಗೊನೆಣ್ಣನವರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿ ಸದಸ್ಯ ಉಮೇಶ ಭಾಗ್ವತ, ಅಧ್ಯಕ್ಷ ವಿಠ್ಠು ಶೆಳಕೆ, ಉಪಾಧ್ಯಕ್ಷೆ ಜನಾಬಾಯಿ ಬರಾಗಡೆ, ಪ್ರಮುಖರಾದ ಕೃಷ್ಣ ಮರಾಠೆ, ಬೀರು ಸಿಂಧೆ, ಮಹೇಶ ದೇಸಾಯಿ, ಸದಸ್ಯರಾದ ಪ್ರಕಾಶ ಶಾಪೂರಕರ, ಲಕ್ಷö್ಮಣ ತೋರ್ವತ್, ಹನುಮಂತ ಬಾರೆಗೌಡ, ರೇಶ್ಮಾ ದೇಸಾಯಿ. ಇಂದಿರಾ ನಾಯ್ಕ, ಪ್ರಭಾ ನಾಯ್ಕ, ಸುನಂದಾ ವಡ್ಡರ್, ಮಂಜುಳಾ ಕಳಸುರಕರ ಸೇರಿದಂತೆ ಕಿರವತ್ತಿ ಗ್ರಾ.ಪಂ. ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.