ಸಿದ್ದಾಪುರ: ತಾಲ್ಲೂಕಿನ ಸಂಪಗೋಡು ಗ್ರಾಮದ ತರಳೀಮಠಕ್ಕೆ ಸುಮಾರು 650 ವರ್ಷಗಳ ಇತಿಹಾಸವಿದ್ದು ಮೊದಲು ಈ ಸ್ಥಳದಲ್ಲಿ ಶಿವನ ಮಂದಿರವಿದ್ದಂತಹ ಕುರುಹುಗಳು ಕೂಡ ಪತ್ತೆಯಾಗಿದೆ ಎಂದು ತರಳೀಮಠದ ಅಧ್ಯಕ್ಷ ಎನ್.ಡಿ. ನಾಯ್ಕ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತರಳೀಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು 1008 ಸತ್ಯನಾರಾಯನ ಪೂಜೆ ಮತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ಈ ಸ್ಥಳದಲ್ಲಿ ಪುರಾತನ ಶಿವನ ದೇವಾಲಯ ಇತ್ತು ಎಂಬ ಉಲ್ಲೇಖ ದೊರೆತಾದ ಭೂಮಿಯನ್ನು ಅಗೆಯಲಾಗಿ ದೇವಾಲಯದ ಅವಷೇಶಗಳು, ಗರ್ಭಗುಡಿ, ಕಲ್ಲುಗಳು ಮತ್ತು ಮೇಲ್ಛಾವಣಿಯ ಹಂಚುಗಳು ದೊರೆತಿವೆ. ಆದ್ದರಿಂದ ಪುನಃ ಈ ಸ್ಥಳದಲ್ಲಿ ಭವ್ಯವಾದ ಶಿವನ ದೇವಾಲಯ ನಿರ್ಮಿಸಲು ತೀರ್ಮಾನಿಸಿ ನಿರ್ಮಾಣಕಾರ್ಯ ನಡೆಯುತ್ತಿದೆ. ದೇವಾಲಯದ ಗರ್ಭಗುಡಿ ಮುಕ್ತಾಯದ ಹಂತದಲ್ಲಿದ್ದು ಹೊರಗಿನ ಚಂದ್ರಶಾಲೆಯ ಕಾರ್ಯ ಪ್ರಗತಿಯಲ್ಲಿದೆ. ದೇವಾಲಯ ನಿರ್ಮಾಣಕ್ಕೆ ಸುಮಾರು 6 ಕೋಟಿ ರೂ. ಅಂದಾಜಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ನೀಡಿ ಸಹಕಸಬೇಕೆ ಎಂದು ವಿನಂತಿಸಿದರು.
ಫೆ. 26 ರಂದು ನಡೆಯಲಿರುವ ಶಿವರಾತ್ರಿಯಂದು ಶಿವಲಿಂಗವನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ತಾಲ್ಲೂಕಿನ ಕಾನಗೋಡಿನ ಎಮ್.ಟಿ.ನಾಯ್ಕ ಶಿವಲಿಂಗ ನಿರ್ಮಿಸುವ ವೆಚ್ಚವನ್ನು ನೀಡಿದ್ದಾರೆ. ಅಂತಯೇ ಗುರುಮೂರ್ತಿ ಎನ್. ನಾಯ್ಕ ನಂದಿ ವಿಗ್ರಹದ ವೆಚ್ಚವನ್ನು ನೀಡಿದ್ದಾರೆ. ಈಗಾಗಲೆ ಕಾರ್ಕಳದಲ್ಲಿ ಸಿದ್ಧಗೊಂಡಿರುವ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ಜ.20 ರಂದು ತರಳೀಮಠಕ್ಕೆ ತರಲು ಸಿದ್ಧತೆ ನಡೆದಿದೆ. ಕಾರ್ಕಳದಿಂದ ಬರುವ ವಿಗ್ರಹಗಳನ್ನು ಸಿದ್ದಾಪುರ ಪಟ್ಟಣದಿಂದ ಮೆರವಣಿಗೆಯ ಮೂಲಕ ತರಳಿಮಠಕ್ಕೆ ತರಲಾಗುವುದು. ನಂತರ ವೈದಿಕರ ಮಾರ್ಗದರ್ಶನದಲ್ಲಿ ಮುಂದಿನ ವಿಧಿ ವಿಧಾನಗಳು ನಡೆಯಲಿವೆ. ಜ. 20 ರಂದು ವಿಗ್ರಹಗಳನ್ನು ಬರಮಾಡಿಕೊಂಡು ಮೆರವಣಿಗೆಯ ಮೂಲಕ ತರಳೀ ಮಠಕ್ಕೆ ಹೋಗುವ ಸಮಯದಲ್ಲಿ ಹೊಸನಗರ ತಾಲ್ಲೂಕಿನ ಸಾರಂಗನಜಡ್ದಿ ಶ್ರೀ ಯೋಗೇಂದ್ರ ಸ್ವಾಮಿಗಳು ನಮ್ಮೊಂದಿಗೆ ಇರಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಕಾರ್ಯದರ್ಶಿ ಎಸ್.ಎಚ್.ನಾಯ್ಕ ಕಾನಗೋಡು, ಸದಸ್ಯರಾದ ಎಂ.ಐ. ನಾಯ್ಕ ಹುಲಿಮನೆ, ದಿನೇಶ ನಾಯ್ಕ, ಬಂಗಾರ್ಯ ನಾಯ್ಕ ಇದ್ದರು.