ಹೊನ್ನಾವರ : ಪ್ರವೀಣ, ಹರ್ಷ, ಪರೇಶ್ ಸಾವಿನ ಪ್ರಕರಣಕ್ಕೆ ಬಣ್ಣ ಹಚ್ಚಿ ವಿಜೃಂಭಿಸಿ ಸಮಾಜದಲ್ಲಿ ದ್ವೇಷದ ಕಿಚ್ಚು ಹಚ್ಚಿದ ಬಿಜೆಪಿ ಪ್ರಮುಖರಿಗೆ ಶಿಕ್ಷೆ ಆಗಬೇಕಿದೆ ಎಂದು ಸಾಗರ ಶಾಸಕ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅವರು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಗುರುವಾರ ಬೆಳಗಾವಿಯಲ್ಲಿ ನಡೆಯಲಿರುವ ಪಕ್ಷದ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮದ ಪೂರ್ವ ತಯಾರಿಗೆ ಕಾರ್ಯಕರ್ತರಿಗೆ ಏರ್ಪಡಿಸಿದ ಸಭೆಯಲ್ಲಿ ಮಾತನಾಡುತ್ತಿದ್ದರು.
೧೦೦ ವರ್ಷಗಳ ಹಿಂದೆ ಬೆಳಗಾವಿಯ ಪವಿತ್ರ ನೆಲದಲ್ಲಿ ೩೯ ನೇ ಕಾಂಗ್ರೇಸ್ ಅಧಿವೇಶನ ನಡೆದಿತ್ತು. ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಅಂದಿನ ಸಭೆಯಲ್ಲಿ ಪಂಡಿತ್ ಜವಹರ್ ಲಾಲ್ ನೆಹರು ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಅಗ್ರ ಗಣ್ಯರು ಸೇರಿದ್ದರು. ಅಂತಹ ಐತಿಹಾಸಿಕ ಸಭೆಯ ಸ್ಮರಣೆಗಾಗಿ ಪಕ್ಷವು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಕಾಂಗ್ರೇಸ್ ತತ್ವದ ಮೇಲೆ ನಂಬಿಕೆ ಇದ್ದ ಪ್ರತಿ ಓರ್ವರು ಜ. ೨೧ ರ ಸಭೆಯಲ್ಲಿ ಭಾಗವಹಿಸುವುದು ಅವಶ್ಯವಿದೆ ಎಂದರು.
ಸಂವಿಧಾನದ ಮೇಲೆ ನಂಬಿಕೆ ಇಲ್ಲದವರ ಮಹಾತ್ಮಾ ಗಾಂಧಿಯವರನ್ನು , ಡಾ. ಅಂಬೇಡ್ಕರ್ ಅವರನ್ನು ತೆಗಳುವವರ ಮಾನಸಿಕ ಸ್ಥಿತಿಯ ಅನಾವರಣ ಆಗಬೇಕಾದರೆ ನಾವು ಸಂವಿಧಾನದ ಕುರಿತು, ಅದರ ಅವಶ್ಯಕತೆಯ ಕುರಿತು ಜನಸಾಮಾನ್ಯರಿಗೆ ಹೆಚ್ಚೆಚ್ಚು ತಿಳುವಳಿಕೆ ನೀಡಬೇಕಿದೆ ಎಂದರು.
ಸಿಧ್ದರಾಮಯ್ಯ ಸರ್ಕಾರದ ಪಂಚ ಗ್ಯಾರೆಂಟಿಗಳು ಅವಕಾಶ ವಂಚಿತರಿಗೆ ಆಶಾಕಿರಣವಾಗಿದೆ. ಶಕ್ತಿ ಯೋಜನೆಯಿಂದಾಗಿ ದೇವಸ್ಥಾನ, ಮಂದಿರಗಳು, ಪವಿತ್ರ ಸ್ಥಳಗಳು ಭಕ್ತರಿಂದ ತುಂಬಿ ಹೋಗಿವೆ. ಯಾತ್ರೆಗೆ ಹಣ ಇಲ್ಲದೆ ಮರಗುತ್ತಿದ್ದ ಕುಟುಂಬದ ಹೆಂಗಳೆಯರು ಯಾತ್ರೆ ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಸರ್ಕಾರದ ಶಕ್ತಿ ಯೋಜನೆಯ ಕುರಿತು ಅಭಿನಂದಿಸಿದ್ದಾರೆ ಎಂದರು.
ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ನಿವೇದಿತಾ ಆಳ್ವಾ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ವೈಖರಿಯಿಂದ ಯುವಕರು, ಶ್ರಮಿಕರು, ರೈತರು ಭೃಮ ನಿರಸನಗೊಂಡಿದ್ದಾರೆ. ೨೦೦೦ ಸಾಲಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಸಂವಿಧಾನ ಪರಿಶಿಲನಾ ಆಯೋಗ ರಚಿಸಿ ತನ್ನ ಅವ್ಯಕ್ತ ಉದ್ದೇಶದ ಈಡೇರಿಕೆಗೆ ಪ್ರಯತ್ನಪಟ್ಟಿದ್ದರಿಂದ ಇಂದು ಹಿಂದುಳಿದ, ಪರಿಶಿಷ್ಟ ಜಾತಿ ಜನಾಂಗಗಳ ಹಕ್ಕು ಮೊಟಕಾಗುತ್ತಿವೆ. ಹೀಗಾಗಿ ಸರ್ಕಾರಿ ಸೆಕ್ಟರ್ಗಳು, ಸರ್ಕಾರಿ ಕೈಗಾರಿಕೆಗಳು ಮುಚ್ಚುತ್ತಿವೆ. ಹೆಚ್.ಎಂ.ಟಿ, ಎರ್ಲೈನ್ಸ್ ಸೇರಿದಂತೆ ಹಲವು ಕಂಪನಿಗಳು ಖಾಸಗಿಯರ ಪಾಲಾಗುತ್ತಿವೆ. ಅಲ್ಲಿ ಯುವಕರಿಗೆ ಸಿಗಬೇಕಾದ, ಸ್ಥಳೀಯರಿಗೆ ಸಿಗಬೇಕಾದ ೧೦ ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಬೇರೆ ಯಾರದೋ ಪಾಲಾಗುತ್ತಿವೆ. ಪ್ರಜಾಪ್ರಭುತ್ವದ ಸಂವಿಧಾನವನ್ನೇ ಬುಡಮೇಲು ಮಾಡಲು ಹೋರಟ ಅಮಿತ್ ಶಾ ಸಂಸತ್ತಿನಲ್ಲಿ ನಿಂತು ಡಾ. ಅಂಬೇಡ್ಕರ್ ಕುರಿತು ಅಪಹಾಸ್ಯ ಮಾಡುತ್ತಾರೆ. ಅವರಿಗೆ ಸಂವಿಧಾನ ವಿರೋಧಿಗಳು ಬೆಂಬಲಿಸುತ್ತಾರೆ. ಇದು ದೇಶಕ್ಕೆ ಅಪಾಯವನ್ನು ತಂದೊಡ್ಡಲಿದೆ. ಈ ಕುರಿತು ನಾವೆಲ್ಲರು ಜಾಗೃತರಾಗಬೇಕಿದೆ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹೇಶ ನಾಯ್ಕ ಸ್ವಾಗತಿಸಿದರು. ಗ್ಯಾರೆಂಟಿ ಸಮಿತಿ ತಾಲೂಕಾಧ್ಯಕ್ಷ ಅಣ್ಣಪ್ಪ ನಾಯ್ಕ ವಂದಿಸಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಸಾಯಿನಾಥ ಗಾವಂಕರ್, ಜಿಲ್ಲಾ ಗ್ಯಾರೆಂಟಿ ಸಮಿತಿ ಅದ್ಯಕ್ಷ ಸತೀಶ್ ಪಿ. ನಾಯ್ಕ, ಹೊನ್ನಾವರ ಬ್ಲಾಕ್ ಅಧ್ಯಕ್ಷ ಮಹೇಶ ನಾಯ್ಕ, ಕುಮಟಾ ಬ್ಲಾಕ್ ಅದ್ಯಕ್ಷ ಭೂವನ್ ಭಾಗವತ್, ಸಿದ್ದಾಪುರ ಬ್ಲಾಕ್ ಅದ್ಯಕ್ಷ ವಸಂತ ನಾಯ್ಕ, ಹಿಂದುಳಿದ ಸೆಲ್ ಜಿಲ್ಲಾದ್ಯಕ್ಷ ಬಾಲಚಂದ್ರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.