ಶಿರಸಿ: ರಾಜ್ಯ ಸ್ಪೆಶಲ್ ಒಲಿಂಪಿಕ್ಸ್ ಮಾರ್ಗದರ್ಶನದಲ್ಲಿ ಉತ್ತರಕನ್ನಡ ಜಿಲ್ಲೆಯ ಸ್ಪೆಶಲ್ ಒಲಿಂಪಿಕ್ಸ್ ಕ್ರೀಡಾಕೂಟ ಜನವರಿ 20 ರಂದು ಶಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಜಿತ ಮನೋಚೇತನಾ ಸಂಸ್ಥೆ ಕ್ರೀಡಾಕೂಟದ ವ್ಯವಸ್ಥೆ ಮತ್ತು ಪ್ರಾಯೋಜನೆ ಮಾಡಲಿದೆ. ಸ್ಪೆಶಲ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಲು ರಾಜ್ಯ ಸ್ಪೆಶಲ್ ಒಲಿಂಪಿಕ್ಸ್ ರಾಜ್ಯ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ , ನಿರ್ದೇಶಕರಾದ ಅಮರೇಂದ್ರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ರಾಘವೇಂದ್ರ ಭಟ್, ಶಿರಸಿಯ ಮಾನ್ಯ ಸಹಾಯಕ ಆಯುಕ್ತರಾದ ಕು. ಕಾವ್ಯರಾಣಿ, ಅವರನ್ನು ಆಹ್ವಾನಿಸಲಾಗಿದೆ. ಅಧ್ಯಕ್ಷತೆಯನ್ನು ಜಿಲ್ಲಾ ಸ್ಪೆಶಲ್ ಒಲಿಂಪಿಕ್ಸ್ ಅಧ್ಯಕ್ಷ ಸುಧೀರ ಭಟ್ ವಹಿಸಲಿದ್ದಾರೆ. ಉತ್ತರಕನ್ನಡ ಜಿಲ್ಲೆಯ ವಿಶೇಷ ಮಕ್ಕಳ ಶಾಲೆಗಳ ವಿದ್ಯಾರ್ಥಿಗಳು, ವಿಶೇಷಚೇತನರು ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ರಾಜ್ಯ ಸ್ಪೆಶಲ್ ಒಲಿಂಪಿಕ್ಸ್ ತಂಡ ಜಿಲ್ಲೆಗೆ ಆಗಮಿಸಿ ತರಬೇತಿ ನೀಡಿತ್ತು. ಕುಮಟಾ, ಶಿರಸಿಯ ವಿಶೇಷ ಮಕ್ಕಳು ಕಳೆದ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲೂ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದು ಉಲ್ಲೇಖನೀಯ. ಬುದ್ಧಿಮಾಂದ್ಯರು ಎಂದು ಸಮಾಜ ತಿರಸ್ಕರಿಸುವ ದಿನಗಳು ಕಳೆದು ಸಮಾಜದ ಮುಖ್ಯವಾಹಿನಿಗೆ ಬಂದು ಕ್ರೀಡಾಸ್ಪರ್ಧೆಗಳಲ್ಲೂ ಸೈ ಎನಿಸುವ ಮಟ್ಟಕ್ಕೆ ವಿಕಲಚೇತನರು ಬಂದಿದ್ದಾರೆ. ಸ್ಪೆಶಲ್ ಒಲಿಂಪಿಕ್ಸ್ ಈ ದಿಸೆಯಲ್ಲಿ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. ಇಂಥ ಅಂಗವಿಕಲರ ಸೇವಾ ಕಾರ್ಯಗಳಿಗೆ ಬೆಂಬಲ ನೆರವು ನೀಡಲು ಹಿತೈಷಿಗಳು, ದಾನಿಗಳು ಮುಂದೆ ಬರಬೇಕು ಎಂದು ಆಶಿಸಲಾಗಿದೆ.