ಹೊನ್ನಾವರ : ರಾಜ್ಯ ಬಿಜೆಪಿ ಅಧ್ಯಕ್ಷ ಸುಳ್ಳು ಬೊಬ್ಬೆ ಹೊಡೆಯುವುದನ್ನು ಬಿಟ್ಟು ತಮ್ಮ ಮನೆಯನ್ನು ನೋಡಿಕೊಳ್ಳಬೇಕು ಅವರ ಮನೆಗೆ ೩ ಬಾಗಿಲುಗಳಿವೆ. ತಮ್ಮ ಪಕ್ಷವನ್ನು ಗಟ್ಟಿಗೊಳಿಸಲಿ, ಅವರಿಗೆ ಬೇರೆ ಪಕ್ಷದ ಉಸಾಬರಿ ಬೇಡ. ಹಿಂದೆ ಸರ್ಕಾರ ಉರುಳಿಸಲು ರೊಕ್ಕ ಇತ್ತು, ನಮ್ಮಲ್ಲಿನ ೧೬ ಜನರನ್ನು ಎತ್ತಕೊಂಡು ಹೋದರು, ಈಗ ನಾವು ೧೪೦ ಕಾಂಗ್ರೇಸ್ ಸೈನಿಕರಿದ್ದೇವೆ, ನಮ್ಮ ಶಕ್ತಿ ಮುಂದೆ ಅವರ ಆಟ ನಡೆಯುವುದಿಲ್ಲ ಎಂದು ಸಾಗರ ಶಾಸಕ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ.೨೧ ರಂದು ಬೆಳಗಾವಿಯಲ್ಲಿ ನಡೆಯಲಿರುವ ಪಕ್ಷದ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮದ ಪೂರ್ವ ತಯಾರಿಗೆ ಆಗಮಿಸಿದ ಸಮಯದಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದರು.
ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆಯ ಕುರಿತು ಪತ್ರಕರ್ತರು ಗಮನ ಸೆಳೆದಾಗ ಪರಿಸರವಾದಿಗಳು, ಸಾರ್ವಜನಿಕರು, ಸಂಘ ಸಂಸ್ಥೆಯವರು ಪುನಃ ನೀರನ್ನು ಕೊಂಡೊಯ್ದರೆ ಆಗುವ ಅನಾನೂಕುಲತೆಯ ಕುರಿತು ಮಾಹಿತಿ ನೀಡಿದ್ದಾರೆ. ಸರ್ಕಾರಕ್ಕೆ ನಾನು ಕೂಡ ಮಾಹಿತಿಯನ್ನು ನೀಡಿದ್ದೇನೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಆ ಯೋಜನೆಯು ಬಿಜೆಪಿ ಸರ್ಕಾರದಲ್ಲಿ ಅನುಮೊದನೆ ಪಡೆದ ಯೋಜನೆಯಾಗಿದೆ. ಯೋಜನೆಯ ವೆಚ್ಚ ರೂ. ೨೦,೦೦೦ ಕೋಟಿಯನ್ನು ಮೀರುತ್ತದೆ. ಸರ್ಕಾರ ಶರಾವತಿ ಮುಳುಗಡೆ ಜನರ ಹಾಗೂ ಡ್ಯಾಮ್‌ನ ಕೆಳಗಡೆಯ ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಕಾಳಜಿ ವಹಿಸಿ ಯೋಜನೆಯನ್ನು ಮುಂದುವರೆಸುವುದಿಲ್ಲ ಎಂದರು.
ಆದರೆ ವಿದ್ಯುತ್ ಪಂಪ್ ಸ್ಟೋರೆಜ್ ಅವಶ್ಯ ಇದೆ. ಮುಂದಿನ ಜನಾಂಗಕ್ಕೆ ವಿದ್ಯುತ್ ಪರ್ಯಾಯ ಶಕ್ತಿಯಾಗಿದೆ. ಇಲ್ಲಿ ವಿದ್ಯುತ್ ಸ್ಟೋರೆಜ್ ಮಾಡುವುದರಿಂದ ಒಂದು ಡ್ಯಾಂಮ್ ಕಟ್ಟುವ ಖರ್ಚು ಉಳಿಯುತ್ತದೆ. ಈ ಯೋಜನೆಗೆ ಹೆಚ್ಚಿನ ಕೃಷಿ ಭೂಮಿಯಾಗಲಿ, ಅರಣ್ಯ ಭೂಮಿಯಾಗಲಿ ಅವಶ್ಯ ಇಲ್ಲ. ಅರಣ್ಯ ಇಲಾಖೆಯ ಅನುಮತಿಯ ಕುರಿತು ಕೇಂದ್ರದೊಂದಿಗೆ ವ್ಯವಹರಿಸುತ್ತಿದ್ದೇವೆ, ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಹಳೆಯ ಅರಣ್ಯ ಅತಿಕ್ರಮಣದಾರರ ಅತಿಕ್ರಮಣಕ್ಕೆ ಸರ್ಕಾರ ಕಾಯ್ದೆಯಂತೆ ರಕ್ಷಣೆ ನೀಡಲಿದೆ, ಹೊಸ ಅತಿಕ್ರಮಣ ಮತ್ತು ೩ ಎಕರೆ ಮೀರಿದ ಅತಿಕ್ರಮಣಗಳಿಗೆ ಸರ್ಕಾರ ಜವಾಬ್ದಾರ ಅಲ್ಲ. ಅರಣ್ಯ ಹಕ್ಕು ಮಾನ್ಯತಾ ಸಮಿತಿ ರಚನೆಯಾಗದೇ ವಿಚಾರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಧ್ಯದಲ್ಲಿಯೆ ಅವುಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಗ್ಯಾರೆಂಟಿ ಯೋಜನೆಗಳು ನಾಡಿನ ಜನಸಾಮಾನ್ಯರ ಬದುಕಲ್ಲಿ ಹೊಸ ಸಂಚಲನ ಸೃಷ್ಟಿಮಾಡಿದೆ. ಈ ಯೋಜನೆ ಯಾವಕಾಲಕ್ಕು ನಿಲ್ಲುವುದಿಲ್ಲ ಎಂದರು.
ಈ ಸಮಯದಲ್ಲಿ ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ ಸಾಯಿನಾಥ ಗವಂಕರ್, ಜಿಲ್ಲಾ ಗ್ಯಾರೆಂಟಿ ಸಮಿತಿ ಅದ್ಯಕ್ಷ ಸತೀಶ್ ಪಿ. ನಾಯ್ಕ, ಹೊನ್ನಾವರ ಬ್ಲಾಕ್ ಅಧ್ಯಕ್ಷ ಮಹೇಶ ನಾಯ್ಕ, ಕುಮಟಾ ಬ್ಲಾಕ್ ಅದ್ಯಕ್ಷ ಭೂವನ್ ಭಾಗವತ್, ಸಿದ್ದಾಪುರ ಬ್ಲಾಕ್ ಅದ್ಯಕ್ಷ ವಸಂತ ನಾಯ್ಕ, ಹಿಂದುಳಿದ ಸೆಲ್ ಜಿಲ್ಲಾದ್ಯಕ್ಷ ಬಾಲಚಂದ್ರ ನಾಯ್ಕ, ಮುಖಂಡರಾದ ವಿಶಾಲ್ ಭಟ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಾನು ಸನ್ಯಾಸಿ ಅಲ್ಲ, ನನಗೆ ಮಂತ್ರಿಗಿರಿ ಕೊಟ್ಟರೆ ಇಲ್ಲ ಎನ್ನದೆ ಒಪ್ಪಿಕೊಳ್ಳುತ್ತೇನೆ, ಆದರೆ ನಾನು ಪಕ್ಷದ ಸಿಪಾಯಿ. ಹೈಕಮಾಂಡ್ ಆಜ್ಞೆ ನಾವು ೧೪೦ ಜನರೂ ಪಾಲಿಸುತ್ತೇವೆ. ರಾಜ್ಯ ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಹುದ್ದೆ ಬದಲಾವಣೆ ಇಲ್ಲ, ಅದು ಬಿಜೆಪಿಯ ಭ್ರಮೆ. ನಾವು ಹೈಕಮಾಂಡ್ ನಿಲುವಿಗೆ ಬದ್ಧರಾದವರು.– ಗೋಪಾಲಕೃಷ್ಣ ಬೇಳೂರು
ಸಾಗರ ಶಾಸಕ, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ