ಶಿರಸಿ: ಸೇವಾ ಜ್ಯೇಷ್ಠತೆ ಬಗ್ಗೆ ಬೆಳಗಾವಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿ, ನ್ಯಾಯ ಕೋರಿದ್ದ ಜನಾರ್ಧನ್ ಭಟ್ಗೆ ಜಯ ಸಿಕ್ಕಿದ್ದು, ಈ ಮೂಲಕ ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ.
ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದ ದಾಕ್ಷಾಯಿಣಿ ಜಿ.ಹೆಗಡೆ ತಾವು ನಿವೃತ್ತರಾಗುವಾಗ, ಸೇವಾ ಜ್ಯೇಷ್ಠತೆಯಲ್ಲಿ ಹಿರಿಯರಾದ ಜನಾರ್ದನ ಭಟ್ಗೆ ಪ್ರಭಾರವನ್ನು ಹಸ್ತಾಂತರಿಸಬೇಕಿತ್ತು. ಆದರೆ ಅವರು ಮೇಲಾಧಿಕಾರಿಗಳಿಗೆ ಜನಾರ್ಧನ ಭಟ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಈ ಮೂಲಕ ಸೇವಾ ಜ್ಯೇಷ್ಠತೆಯಲ್ಲಿ ಜನಾರ್ಧನ ಭಟ್ ಇವರಿಗಿಂತ ಕಿರಿಯರಾದ ಅಧ್ಯಾಪಕರಿಗೆ ಪ್ರಭಾರವನ್ನು ಹಸ್ತಾಂತರಿಸಿದ್ದರು. ಹೀಗಾಗಿ ಹಿಂದಿನ ಪ್ರಾಂಶುಪಾಲರಾಗಿದ್ದ ಜನಾರ್ಧನ ಭಟ್ ತಮ್ಮ ಸೇವಾ ಜ್ಯೇಷ್ಠತೆಯನ್ನು ಪರಿಗಣಿಸದಿರುವ ಬಗ್ಗೆ ಪ್ರಶ್ನಿಸಿದ್ದರು. ಅರ್ಜಿದಾರರ ಪರವಾಗಿ ಶಿರಸಿಯ ವಕೀಲರಾದ ಸೌರಭ ಹೆಗಡೆ ಹುಡ್ಲಮನೆ ವಕಾಲತ್ತು ವಹಿಸಿದ್ದು, ಶ್ರೀಮತಿ ದಾಕ್ಷಾಯಣಿ ಜಿ. ಹೆಗಡೆ ಇವರು ಮಾಡಿರುವ ಆರೋಪಗಳು ಸುಳ್ಳೆಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಮನಗಂಡ ನ್ಯಾಯ ಮಂಡಳಿಯು ಜನಾರ್ಧನ ಭಟ್ ಇವರಿಗೆ ಪ್ರಾಂಶುಪಾಲರ ಪ್ರಭಾರವನ್ನು ಹಸ್ತಾಂತರಿಸುವಂತೆ ಆದೇಶಿಸಿದ್ದು, ಕಾಲೇಜು ಶಿಕ್ಷಣ ಇಲಾಖೆಯಿಂದಲೂ ಸಹ ಈ ಆದೇಶವನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಹೀಗಾಗಿ ಜನಾರ್ದನ ಭಟ್ ಇವರು ಜ.10ರಂದು ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತೊಮ್ಮೆ ಅಧಿಕಾರವಹಿಸಿಕೊಂಡಿದ್ದಾರೆ .