ಅಂಕೋಲಾ: ತಾಲೂಕಿನ ಗಂಗಾವಳಿ ನದಿಗೆ ಅಡ್ಡಲಾಗಿ ಕಲ್ಲೇಶ್ವರ – ರಾಮನಗುಳಿ ಸಂಪರ್ಕಿಸುವ 25 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಇದುವರೆಗೆ ಸೇತುವೆ ಉದ್ಘಾಟನೆಗೊಳ್ಳದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ಸೇತುವೆ ಕಾಮಗಾರಿಯನ್ನು ಮಂಗಳೂರು ಮೂಲದ ಗುತ್ತಿಗೆ ಸಂಸ್ಥೆ ಮುಗ್ರೋಡಿ ಕನ್ಸ್ಟ್ರಕ್ಷನ್ ಅವರು ಸೇತುವೆ ಕಾಮಗಾರಿಯನ್ನು ಅತ್ಯಂತ ವೇಗ ಹಾಗು ಗುಣಮಟ್ಟದೊಂದಿಗೆ ನಿರ್ಮಿಸಿ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಸೇತುವೆ ನಿರ್ಮಾಣಗೊಂಡು ವರ್ಷ ಕಳೆದರೂ ಲೋಕಾರ್ಪಣೆಗೊಂಡಿಲ್ಲ.
ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕಲ್ಲೇಶ್ವರ, ಹಳವಳ್ಳಿ, ಕಮ್ಮಾಣಿ, ಹೆಗ್ಗಾರ ಮುಂತಾದ ಗ್ರಾಮಗಳಿಗೆ ಏಕೈಕ ಸಂಪರ್ಕ ಕೊಂಡಿ ಇದಾಗಿದ್ದು. ಮೊದಲು ಈ ಗ್ರಾಮಗಳಿಗೆ ದೂರದ ಯಲ್ಲಾಪುರ ಪಟ್ಟಣದಿಂದ ಬಸ್ ವ್ಯವಸ್ಥೆ ಇದ್ದಿತ್ತು. ಯಾವಾಗ ಸೇತುವೆ ಕುಸಿಯಿತೋ ಆಗಿನಿಂದ ಬಸ್ ವ್ಯವಸ್ಥೆಯೂ ಸ್ಥಗಿತಗೊಂಡಿದೆ. ರಾಮನಗುಳಿ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೊಳ್ಳದಿರುವುದಕ್ಕೆ ಬಸ್ ಸಂಪರ್ಕವನ್ನು ಕಲ್ಪಿಸುವುದು ಕಷ್ಟಕರವಾಗಿದೆ. ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕೋಟೆಯಿಂದ ಹಳವಳ್ಳಿಯವರೆಗೆ 5 ಕಿ.ಮೀ ಸಿಮೆಂಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ರಸ್ತೆ ಪಕ್ಕ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ. ಇನ್ನು 15 ರಿಂದ 20 ದಿನಗಳೊಳಗೆ ಕಾಮಗಾರಿ ಮುಗಿಯಲಿದ್ದು ಬಳಿಕ ವಾಹನಗಳ ಮುಕ್ತ ಓಡಾಟಕ್ಕೆ ಈ ರಸ್ತೆ ತೆರೆದುಕೊಳ್ಳಲಿದೆ. ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಕೂಡಲೇ ಸೇತುವೆ ಉದ್ಘಾಟನೆ ಹೊಂದಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಆಗ್ರಹಿಸಿದ್ದಾರೆ.
ಈ ಬಗ್ಗೆ ನಮ್ಮ ಪ್ರತಿನಿಧಿ ಶಾಸಕ ಸತೀಶ ಸೈಲ್ ರಲ್ಲಿ ವಿಚಾರಿಸಿದಾಗ ಕೋಟೆ-ಹಳವಳ್ಳಿ ಭಾಗದ ರಸ್ತೆ ಕಾಮಗಾರಿ ಅಲ್ಪ ಪ್ರಮಾಣದಲ್ಲಿ ಉಳಿದುಕೊಂಡಿದೆ. ಯಾವುದೇ ಅಪಘಾತ-ಅನಾಹುತ ಉಂಟಾಗಬಾರದೆಂಬ ಸುರಕ್ಷತೆ ದೃಷ್ಟಿಯಿಂದ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕವೇ ಸೇತುವೆಯನ್ನು ಉದ್ಘಾಟನೆ ಮಾಡಿ, ಬಸ್ ವ್ಯವಸ್ಥೆಯನ್ನು ಶೀಘ್ರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸೇತುವೆ ಉದ್ಘಾಟನೆಗೊಳ್ಳದ ಹೊರತು ಬಸ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಶಾಲಾ-ಕಾಲೇಜಿಗೆ ತೆರಳುವ ಮಕ್ಕಳು ನಿತ್ಯ ಬಸ್ ಇಲ್ಲದೇ ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳಬೇಕಾದ ಸ್ಥಿತಿ ಇದೆ. ಆದಷ್ಟು ಬೇಗ ಸೇತುವೆ ಉದ್ಘಾಟನೆಗೊಂಡು ಬಸ್ ಸಂಪರ್ಕ ಕಲ್ಪಿಸುವಂತಾಗಲಿ.
ಶ್ರೀಕಾಂತ ಶೆಟ್ಟಿ ಗುಳ್ಳಾಪುರ
ಹಿರಿಯ ಮುತ್ಸದ್ದಿ, ಅಧ್ಯಕ್ಷರು ಗ್ರಾ.ಪಂ ಇಡಗುಂದಿ