ಅಂಕೋಲಾ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆ.ಡಿ.ಸಿ.ಸಿ ಬ್ಯಾಂಕಿನ ಗುಳ್ಳಾಪುರ, ಕಲ್ಲೇಶ್ವರ, ಹಿಲ್ಲೂರು 3 ಶಾಖೆಗಳ ನೂತನ ಸ್ವಂತ ಕಟ್ಟಡವನ್ನು ಕೆ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ, ಶಾಸಕರಾದ ಶಿವರಾಮ ಹೆಬ್ಬಾರ್ ಶುಕ್ರವಾರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
3 ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿದ ಶಿವರಾಮ ಹೆಬ್ಬಾರ್ ಕೆ.ಡಿ.ಸಿ.ಸಿ ಬ್ಯಾಂಕ್ ಜಿಲ್ಲೆಯ ರೈತರ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಈ ಮೂರು ಶಾಖೆಗಳು ಇಂದು ಸ್ವಂತ ಕಟ್ಟಡವನ್ನು ಹೊಂದಿ ಉದ್ಘಾಟನೆಗೊಂಡಿರುವುದು ಖುಷಿ ತಂದಿದೆ. ಆರ್‌ಬಿಐನಿಂದ ಯುಪಿಐ ವ್ಯವಸ್ಥೆ ಅನುಷ್ಠಾನಕ್ಕೆ ಲೈಸೆನ್ಸ್ ದೊರೆತಿದ್ದು ಇನ್ನು ಕೆಲವೇ ದಿನಗಳಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಈ ಬ್ಯಾಂಕಿನಲ್ಲಿ 0% ಬಡ್ಡಿದರದಲ್ಲಿ ಸಾಲವನ್ನು ಪಡೆದು ಬೇರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡುವುದನ್ನು ನಿಲ್ಲಿಸಿ ಇದೇ ಬ್ಯಾಂಕಿನಲ್ಲಿ ವಹಿವಾಟು ನಡೆಸುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ಕೃಷಿ ಸಾಲದ ಹಣ ಬಿಡುಗಡೆಯಾಗದೇ ಇರುವುದು ರೈತರಿಗೆ ಸಾಲ ನೀಡಲು ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಳ್ಳಾಪುರದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ ಇಡಗುಂದಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಕಲ್ಲೇಶ್ವರದಲ್ಲಿ ಕಟ್ಟಡ ನಿರ್ಮಿಸಲು ಜಾಗ ನೀಡಿದ ಜಿ.ವಿ ಹೆಗಡೆಗೆ ಸನ್ಮಾನಿಸಲಾಯಿತು. ಸುಸಜ್ಜಿತ ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಪರಮೇಶ್ವರ ಪಟಗಾರ, ಆರ್ಥಿಕ ಸಲಹಾ ಸಮಿತಿ ಸದಸ್ಯರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಮಕೃಷ್ಣ ಹೆಗಡೆ ಕಡವೆ, ನಾಗಪತಿ ಹೆಗಡೆ ಕಾಗೇರಿ, ಗಣಪತಿ ಭಟ್ಟ, ಗೋಪಾಲಕೃಷ್ಣ ವೈದ್ಯ, ನಾರಾಯಣ ಭಟ್ಟ ಬಟ್ಲಗುಂಡಿ, ಗ್ರಾ.ಪಂ ಅಧ್ಯಕ್ಷ ವಿನೋದ ಭಟ್ಟ ಮುಂತಾದವರು ಉಪಸ್ಥಿತರಿದ್ದರು. ಜಿ.ಆರ್ ಭಟ್ಟ ನಿರೂಪಿಸಿದರು. ಆನಂದರಾಯ ಗೊಳಸಂಗಿ ವಂದಿಸಿದರು.