ಶಿರಸಿ: ಸ್ಕೊಡ್ವೆಸ್ ಸಂಸ್ಥೆಯು ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತ್ ರವರ ಸಹಯೋಗದಲ್ಲಿ ನಗರದ ಮಾರಿಕಾಂಬಾ ಪ್ರೌಢಶಾಲೆಯ ಆವರಣದಲ್ಲಿ ಆರಂಭಿಸಿರುವ STEM ಲ್ಯಾಬ್ಗೆ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ವಿದ್ಯಾ ಪೋಷಕ ಸಂಸ್ಥೆಯ ಶಿಕ್ಷಕರು ಅಧ್ಯಯನ ಪ್ರವಾಸಕ್ಕೆ ಬಂದು ತರಬೇತಿ ಪಡೆದರು.
ಇತ್ತಿಚೆಗೆ ಉದ್ಘಾಟನೆಗೊಂಡ STEM ಲ್ಯಾಬ್ ಅತೀ ಕಡಿಮೆ ಅವಧಿಯಲ್ಲಿ ರಾಜ್ಯದ ವಿವಿಧ ಪ್ರದೇಶಗಳ ಶಿಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರಿಗೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದ್ದು ಈ ಪ್ರಯೋಗಾಲಯದ ಕುರಿತ ಹೆಚ್ಚಿನ ಅಧ್ಯಯನಕ್ಕಾಗಿ ರಾಜ್ಯದ ವಿವಿಧ ಶಾಲೆಗಳ ಶಿಕ್ಷಕರು ಅಧ್ಯಯನ ಪ್ರವಾಸಕ್ಕೆ ಬರುತ್ತಿದ್ದಾರೆ.
STEM ಲ್ಯಾಬ್ನಲ್ಲಿ ಕೇವಲ ವಿಜ್ಞಾನ ತಂತ್ರಜ್ಞಾನವಲ್ಲದೇ ರೋಬೋಟಿಕ್ಸ್ ವಿಜ್ಞಾನದ ಬಗ್ಗೆಯೂ ತರಬೇತಿ ನೀಡಲಾಗುತ್ತಿದ್ದು, ಈ ವಿಷಯಗಳು ಪ್ರಯೋಗಾಲಯದ ಕುರಿತಾದ ಅಧ್ಯಯನಕ್ಕೆ ಹೆಚ್ಚಿನ ಕುತೂಹಲ ಸೃಷ್ಟಿಸುವಂತಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಈ ಸೌಲಭ್ಯ ದೊರೆಯುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಆರಂಭದಲ್ಲಿ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ STEM ಲ್ಯಾಬ್ ಕುರಿತು ಸಂಕ್ಷಿಪ್ತವಾಗಿ ವಿವರಿಸಿ ಸ್ಕೊಡ್ವೆಸ್ ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಶಿರಸಿ ಗಣೇಶ ನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಕೆ.ಎಲ್. ಭಟ್, ವಿದ್ಯಾ ಪೋಷಕ ಸಂಸ್ಥೆಯ ಮಂಜುನಾಥ, ಸ್ಕೊಡ್ವೆಸ್ ಸಂಸ್ಥೆಯ ಉಮೇಶ, ದಿನೇಶ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.