ರಾಜಕೀಯ ಕಾರಣಕ್ಕೆ ಶಾಸಕರ ಮೇಲಿನ ಆರೋಪ ಸರಿಯಲ್ಲ | ಯಂತ್ರೋಪಕರಣಗಳ ಖರೀದಿಗೆ ಹಣ ಖಡಿತಗೊಳಿಸಿದ್ದರ ಮಾಹಿತಿಯಿಲ್ಲ
ಶಿರಸಿ: ಶಿರಸಿ ಸರಕಾರಿ ಆಸ್ಪತ್ರೆ ವಿಚಾರದಲ್ಲಿ ಶಾಸಕರ ವಿರುದ್ಧ ಟೀಕೆ ಸರಿಯಲ್ಲ. ಆಸ್ಪತ್ರೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಶಾಸಕ ಭೀಮಣ್ಣ ನಾಯ್ಕ ಮಾಡಲು ಸಮರ್ಥರಿದ್ದಾರೆ. ಮತ್ತು ಇದರ ಸತ್ಯಾಸತ್ಯತೆಯನ್ನು ಅನಂತಮೂರ್ತಿ ಹೆಗಡೆ ಅವರು ಪರಾಮರ್ಷಿಸಿಕೊಳ್ಳಲಿ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ದೀಪಕ್ ದೊಡ್ಡೂರು ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅನಂತಮೂರ್ತಿ ಹೆಗಡೆ ಅವರು ಉತ್ತರ ಕನ್ನಡದ ರಾಜಕೀಯ ವಿಷಯಕ್ಕೆ ಅಪವಾದ ಎಂಬಂತಾಗಿದ್ದಾರೆ. ಇನ್ನೊಬ್ಬರಿಗೆ ಹೇಳುವ ಮೂಲಕ ಪ್ರಚಾರವನ್ನು ಬಯಸುವುದು ಖಂಡನೀಯ. ಮಾಜಿ ಶಾಸಕ ಕಾಗೇರಿ ಅವರ ಸಮಯದಲ್ಲಿ ₹30 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿತ್ತು, ನಂತರದಲ್ಲಿ ಕಾಂಗ್ರೆಸ್ ಸರಕಾರ ಬಂದಮೇಲೆ 44 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದೆ. ಆಸ್ಪತ್ರೆ ಕೆಲಸ ಸರಿಯಾಗಿ ನಡೆಯುತ್ತಿದ್ದು, ಸದ್ಯದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.
ಯಂತ್ರೋಪಕರಣಗಳ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಂತ್ರೋಪಕರಣಗಳ ಖರೀದಿ ಹಣಕ್ಕೆ ಹಾಲಿ ಸರಕಾರ ಕಡಿತಗೊಳಿಸಿದ್ದರ ಬಗ್ಗೆ ಪೂರ್ಣ ಮಾಹಿತಿಯಿಲ್ಲ, ಮತ್ತು ಮೇಲ್ದರ್ಜೆ ಆಸ್ಪತ್ರೆ ಬದಲು, ತಾಲೂಕು ಆಸ್ಪತ್ರೆ ಎಂದು ಸರಕಾರದ ಆಡಳಿತ ವಲಯದಲ್ಲಿ ನಡೆಯುತ್ತಿರುವ ಕಾಗದಪತ್ರಗಳ ಬಗ್ಗೆ ಯೂ ಮಾಹಿತಿ ಇಲ್ಲ. ಆ ರೀತಿಯಲ್ಲಿ ನಡೆಯಬಾರದು. ಏನು ಅನುದಾನ ಘೋಷಣೆ ಆಗಿದೆಯೋ, ಅದನ್ನು ಸರಕಾರದಿಂದ ತರಿಸುವ ಪ್ರಯತ್ನ ನಮ್ಮಿಂದಾಗುತ್ತದೆ. ಶಾಸಕ ಭೀಮಣ್ಣ ನಾಯ್ಕ ಈ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ತಾಲೂಕಾ ಆಸ್ಪತ್ರೆ ಎಂಬುದಾಗಿ ದಾಖಲಾತಿಗಳಲ್ಲಿ ನಮೂದಾಗುತ್ತಿರುವುದರ ಕುರಿತು ಪೂರ್ಣ ಮಾಹಿತಿ ತೆಗದುಕೊಂಡು ಸರಕಾರಕ್ಕೆ ನಾವೂ ಮನವಿ ಮಾಡುತ್ತೇವೆ. ಶಾಸಕರ ಮೇಲೆ ಒತ್ತಡ ತರುತ್ತೇವೆ. ಅನಂತಮೂರ್ತಿ ಅವರು ತನ್ನ ಸ್ವಂತ ಟಿಆರ್ಪಿ ಗೋಸ್ಕರ ಸರಿಯಾದ ಮಾಹಿತಿ ಇಲ್ಲದೇ ಪ್ರಚಾರ ಮಾಡುವುದನ್ನು ಕೈ ಬಿಡಬೇಕಿದೆ.
ಇಂದಿನ ಬಹುತೇಕ ಜನಪ್ರತಿನಿಧಿಗಳು ಸೂಪರ್ ವೈಸರ್ ಆಗಿದ್ದಾರೆ. ಕಾಗೇರಿಯವರು ಈ ಜಿಲ್ಲೆಗೆ, ಮೋದಿಯವರು ಈ ದೇಶಕ್ಕೆ ಸೂಪರ್ವೈಸ್ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಪತ್ರಿಕಾ ಹೇಳಿಕೆಯ ಬದಲು ಶಾಸಕರನ್ನು ವಯಕ್ತಿಕವಾಗಿ ಮುಖಾಮುಖಿಯಾಗಿ ಭೇಟಿ ಮಾಡಿ ಮಾತನಾಡಲಿ. ಅವರಿಗೆ ಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಅವರಿಗೆ ರಾಜ್ಯಶಾಸ್ತ್ರದ ತಿಳುವಳಿಕೆ ಬೇಕೆನಿಸುತ್ತದೆ. ಕೇವಲ ಒಂದು ಬಿಎಸ್ಎನ್ಎಲ್ ಟವರ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಂಥದರಲ್ಲಿ ಆಸ್ಪತ್ರೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆಸ್ಪತ್ರೆ ವಿಚಾರದಲ್ಲಿ ಅನಾವಶ್ಯಕ ಹೇಳಿಕೆ ಕೊಡುವುದನ್ನು ಅವರು ಕೈಬಿಡಬೇಕು. ಅನಂತಮೂರ್ತಿ ಹೆಗಡೆ ಸರಿಯಾದ ಗುರಿ ಮತ್ತು ಗುರುವಿನ ಆಶೀರ್ವಾದದಿಂದ ಅವರು ಮುನ್ನಡೆಯಲಿ.
ಆಸ್ಪತ್ರೆ ವಿಚಾರಕ್ಕೆ ಸಂಬಂಧಿಸಿ ಯಾವುದೇ ನ್ಯೂನ್ಯತೆ ಎದುರಾದರೆ ಅದನ್ನು ಶಾಸಕರು ಹಾಗು ಸರಕಾರದ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದರು. ಸುದ್ದಿಗೋಷ್ಟಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಕಾಂಗ್ರೆಸ್ ಪ್ರಮುಖರಾದ ಜಗದೀಶ ಗೌಡ, ನಾಗರಾಜ ಮಡಿವಾಳ, ಬಸವರಾಜ ದೊಡ್ಮನಿ, ಜ್ಯೋತಿ ಗೌಡ ಪಾಟೀಲ್, ರಘು ಕಾನಡೆ, ಮಧು ಬಿಲ್ಲಾ, ಸುಭಾಷ್ ನಾಯ್ಕ ಸೇರಿದಂತೆ ಇತರರು ಇದ್ದರು.