ಬನವಾಸಿ: ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ್ ತಿಳಿಸಿದರು.
ಅವರು ಶುಕ್ರವಾರ ಸಮೀಪದ ಮಧುರವಳ್ಳಿ ಗ್ರಾಮದ ನಿರ್ಗತಿಕ ಕುಟುಂಬದ ಫಲಾನುಭವಿ ಸಾವಿತ್ರಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡುತ್ತಾ, ನೂರಾರು ಅಶಕ್ತ, ಅನಾಥ, ಕಡು ಬಡತನ, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಮಾಸಾಶನ ಹಾಗೂ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ 19000 ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ1000 ರಿಂದ 5000ರೂ.ವರೆಗೆ ಮಾಸಾಶನ ನೀಡುತ್ತಿದೆ. ಉಡುಪಿ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 525, ಜಿಲ್ಲೆಯಲ್ಲಿ 162, ಹಾಗೂ ಶಿರಸಿ ತಾಲ್ಲೂಕಿನಲ್ಲಿ 6 ಜನ ಫಲಾನುಭವಿಗಳಿಗೆ ಮಾಸಾಶನದೊಂದಿಗೆ ಪಾತ್ರೆ, ತಲೆ ದಿಂಬು, ಸೀರೆ, ಹೊದಿಕೆ ಸೇರಿದಂತೆ ಅವಶ್ಯಕ ವಸ್ತುಗಳನ್ನೊಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಸುಧೀರ ನಾಯರ್ ಮಾತನಾಡಿ, ಗ್ರಾಮೀಣ ಭಾಗದ ಅಭ್ಯುದಯ, ಆರ್ಥಿಕ ಸಬಲತೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಕೃಷಿ ಅಭಿವೃದ್ಧಿ, ಸಾಮಾಜಿಕ ಕ್ಷೇತ್ರ, ಜನರ ಜೀವನ ಮಟ್ಟ ಸುಧಾರಣೆ ಮಾಡುವುದರೊಂದಿಗೆ ಹಲವಾರು ಸಮಾಜಮುಖಿ ಚಿಂತನೆಗಳೊಂದಿಗೆ ಸರ್ವರ ಒಳಿತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸೇವೆ ಮಾಡುತ್ತಿದೆ ಎಂದರು.
ವಾತ್ಸಲ್ಯ ಕಿಟ್ ಸ್ವೀಕರಿಸಿದ ಮಧುರವಳ್ಳಿಯ ಸಾವಿತ್ರಮ್ಮ ಮಾತನಾಡಿ, ನಮ್ಮಂತಹ ನಿರ್ಗತಿಕ ಅನಾಥ ಬಡವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ದಾರಿದೀಪವಾಗಿದೆ ಎಂದು ಭಾವುಕರಾದರು.
ತಾಲೂಕಿನ ವ್ಯಾಪ್ತಿಯಲ್ಲಿ ಹನುಮಂತಿ, ತದ್ದಲಸೆ, ಕಲಗದ್ದೆ, ಇಸಳೂರು, ಎಕ್ಕಂಬಿ, ಮಧುರವಳ್ಳಿ ಗ್ರಾಮದಲ್ಲಿರುವ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್, ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯ ಅಧಿಕಾರಿ ಮಲ್ಲಿಕಾ ಶೆಟ್ಟಿ, ವಲಯ ಮೇಲ್ವಿಚಾರಕ ನಾಗರಾಜ ಪಿ, ಒಕ್ಕೂಟದ ಅಧ್ಯಕ್ಷ ಯೋಗೇಂದ್ರ ನಾಯ್ಕ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ರವೀಂದ್ರ ನಾಯ್ಕ್, ಸೇವಾ ಪ್ರತಿನಿಧಿ ಶಿವಾಜಿ ನಾಯ್ಕ್ ಇದ್ದರು.