ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕನಕನಹಳ್ಳಿಯ ಲಕ್ಷ್ಮೀನರಸಿಂಹ ಸಭಾಭವನದ ಆವಾರದಲ್ಲಿ ಊರ ಜನರ ಸಹಕಾರದೊಂದಿಗೆ ಶನಿವಾರ ಸಂಜೆ ಆಲೆಮನೆ ಹಬ್ಬ ಅತ್ಯಂತ ಸಂಭ್ರಮದಲ್ಲಿ ಅಚ್ಚುಕಟ್ಟಾಗಿ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಕನಕನಹಳ್ಳಿಯಲ್ಲಿ ಆಲೆಮನೆಯ ಸಿಹಿಸಂಭ್ರಮ, ಕಬ್ಬಿನೋತ್ಪನ್ನಗಳ ಪ್ರಿಯರು, ಬಂಧು ಮಿತ್ರರು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ 2ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಲೆಮನೆ ಹಬ್ಬದಲ್ಲಿ ಭಾಗಿಯಾಗುವ ಮೂಲಕ ಆಲೆಮನೆ ಹಬ್ಬವನ್ನು ಯಶಸ್ವಿಗೊಳಿಸಿದರು. ಸಿದ್ದಿ ಬುಡಕಟ್ಟು ಜನಾಂಗದ ಡಮಾಮಿ ಕುಣಿತ ಆಲೆಮನೆ ಹಬ್ಬದ ವಿಶೇಷತೆಯಾಗಿತ್ತು. ಅಲ್ಲದೇ ಬಾಟಲಿ ಸಹಿತ ಕಬ್ಬಿನ ಹಾಲು, ತೊಡೆದೇವು, ನೊರೆಬೆಲ್ಲ, ಕಾಕಂಬಿ, ಮಿರ್ಚಿಭಜೆ ಸೀಮಿತ ದರದಲ್ಲಿ ಮಾರಾಟಕ್ಕೆ ಲಭ್ಯವಿರುವುದರಿಂದ ಜನರು ಭರ್ಜರಿ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಕನಕನಹಳ್ಳಿ ಆಲೆಮನೆ ಹಬ್ಬದ ಸಂಘಟಕರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವುದಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದರು.