ಯಶಸ್ವಿಗೊಂಡ ಸುವರ್ಣ ಸಂಭ್ರಮ: ಹಿರಿಯರಿಗೆ ಗೌರವ ಸನ್ಮಾನ
ಸಿದ್ದಾಪುರ: ಒಂದು ಯುವಕ ಸಂಘ 50ವರ್ಷಗಳ ಕಾಲ ನಿರಂತರ ನಡೆದುಕೊಂಡು ಬರುವುದು ಸುಲಭವಾದುದ್ದಲ್ಲ. ಹಲವಾರು ಯುವಕರ ಸ್ವಯಂ ಪ್ರೇರಣೆ, ಶಕ್ತಿ, ಕ್ರಿಯಾಶೀಲತೆಯಿಂದ ಉಳಿದುಕೊಂಡು ಬಂದಿದೆ. ಸ್ವಂತಕ್ಕಾಗಿ ಏನೂ ಇಲ್ಲದೇ, ಸಮಾಜದ ಶ್ರೇಯೋಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಕಾರ್ಯ ನಿರ್ವಹಿಸುವ ಯುವಕ ಸಂಘಗಳ ಕಾರ್ಯ ಶ್ಲಾಘನೀಯ ಎಂದು ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ಸಭಾಭವನದಲ್ಲಿ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘ ವಾಜಗದ್ದೆ ಇದರ ಸುವರ್ಣ ಸಂಭ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಐಟಿಬಿಟಿ ಕಂಪನಿಗಳ ಕೆಲಸದಲ್ಲಿ ತೊಡಗಿಕೊಂಡಿದ್ದು, ಸಮಾಜಕ್ಕಾಗಿ ಸಮಯವನ್ನು ನೀಡಲಾಗದಂತಹ ಪರಿಸ್ಥಿತಿ ಎದುರಾಗಿದೆ. ಆದರೆ ವರ್ಕ್ಫ್ರಮ್ ಹೋಮ್ನಿಂದಾಗಿ ಹಲವಾರು ಯುವಕರು ತಮ್ಮ ತಮ್ಮ ಊರುಗಳಲ್ಲಿದ್ದು, ಕೃಷಿ, ಯುವಕ ಸಂಘಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಸಂತಸದ ವಿಷಯವಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ತಮ್ಮ ವೃತ್ತಿಯೊಂದಿಗೆ ಯುವಕ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾಗಿದೆ. ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘವು 50 ವರ್ಷಗಳಿಂದ ನಿರಂತರಾಗಿ ಸಮಾಜಕ್ಕಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಚಟುವಟಿಕೆಗಳನ್ನು ನಡೆಸುವಂತಾಗಲಿ ಎಂದು ಆಶಿಸಿದರು.
ಶಿರಸಿ ಡೆವಲಪ್ಮೆಂಟ್ ಸೊಸೈಟಿಯ ಕೃಷಿ ಸಲಹೆಗಾರ ಡಾ.ವಿ.ಎಂ.ಹೆಗಡೆ ಮಾತನಾಡಿ ಹಣದ ಜೊತೆ ನೆಮ್ಮದಿ, ನೆಮ್ಮದಿಯೊಂದಿಗೆ ಹಣ ಇದ್ದಾಗ ಮಾತ್ರ ಜೀವನ ಸುಲಭ. ಹಣ, ನೆಮ್ಮದಿ ಎರಡೂ ಜೀವನಕ್ಕೆ ಅತ್ಯವಶ್ಯವಾದದ್ದು. ಹಳ್ಳಿಯಲ್ಲಿದ್ದುಕೊಂಡೇ ಹಣ, ನೆಮ್ಮದಿ ಸಿಗಬೇಕಾದರೆ ಯಾಂತ್ರೀಕೃತ ಕೃಷಿಯತ್ತ ರೈತರು ತಮ್ಮನ್ನು ತೊಡಗಿಸಿಕೊಂಡು ಸುಸ್ಥಿರ ಕೃಷಿಯನ್ನು ನಡೆಸಬೇಕು. ಅಡಕೆ ಬೆಳೆಯನ್ನು ಮಾತ್ರ ನಂಬಿ ಜೀವನ ನಡೆಸುವುದಕ್ಕಿಂತ ವಿವಿಧ ಬೆಳೆಗಳನ್ನು ಬೆಳೆಯುವುದರ ಮೂಲಕ ಹಳ್ಳಿಯಲ್ಲಿಯೂ ಹಣ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಬೇಕಾಗಿದೆ ಎಂದು ಹೇಳಿದರು.
ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಎಚ್.ಜಿ.ಮಾತನಾಡಿ ವಾಜಗದ್ದೆ ಯುವಕ ಸಂಘ ಎಲೆ ಚುಕ್ಕಿ ರೋಗದ ಕುರಿತು ವಿಶೇಷ ಕಾರ್ಯಾಗಾರ ನಡೆಸಿ ಅಡಕೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ವಿ.ಹೆಗಡೆ ಪೇಟೇಸರ ಅಧ್ಯಕ್ಷತೆವಹಿಸಿದ್ದರು. ದುರ್ಗಾವಿನಾಯಕ ದೇವಾಲಯದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೇಸರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಿರಿ ಹೆಗಡೆ ಪ್ರಾರ್ಥನೆ ಹಾಡಿದಳು, ನಾಗಪತಿ ಹೆಗಡೆ ಸಂಗಡಿಗರು ವೇದಘೋಷ ಮಾಡಿದರು. ಮಹಾಬಲೇಶ್ವರ ಹೆಗಡೆ ಸುಳಗಾರ ಸ್ವಾಗತಿಸಿದರು.ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಪ್ರಾಸ್ತಾವಿಕ ಮಾತನಾಡಿದರು. ವಿ.ಗೋಪಾಲ ಜೋಶಿ ವಾಜಗದ್ದೆ ವಂದಿಸಿದರು. ವಿನಾಯಕ ಹೆಗಡೆ ಪೇಟೇಸರ ಸನ್ಮಾನ ಪತ್ರ ವಾಚಿಸಿದರು. ಸಂಜಯ ಹೆಗಡೆ ಹುಲಿಮನೆ ನಿರ್ವಹಿಸಿದರು.