ಶಿರಸಿ: ಸಮಾಜಮುಖೀ ಚಿಂತನೆಯೊಂದಿಗೆ ನಿರಂತರ ಸುತ್ತಲಣ ಸಮುದಾಯಕ್ಕೆ ಅಗತ್ಯವಿರುವ ಕಾರ್ಯಗಳನ್ನು ಮಾಡುತ್ತ ಬಂದಿರುವ ಶಿರಸಿ ರೋಟರಿಯು 64 ಸೇವಾಸಂಪನ್ನ ವರ್ಷಗಳನ್ನು ತೃಪ್ತಿಯಿಂದ ಪೂರೈಸಿ 65ಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಆಲೇಮನೆ ಹಬ್ಬವನ್ನು ರೋಟರಿ ಸಂಸ್ಥೆಯು ಆಯೋಜಿಸಿದೆ.
ನಗರದ ವಿಕಾಸಾಶ್ರಮ ಬಯಲಿನಲ್ಲಿ ಜನವರಿ 23 ರಿಂದ ಜನವರಿ 26ರವರೆಗೆ 4 ದಿನಗಳ ಕಾಲ ರೋಟರಿ ಆಹಾರ ಮೇಳ ಹಾಗೂ ಆಲೆಮನೆ ಉತ್ಸವ 2025 ನಡೆಯಲಿದೆ.
ಸಂಸ್ಥೆ ಸಾಗಿ ಬಂದ ಹಾದಿ:
ಆರಂಭದಲ್ಲಿ ಎಂ.ಇ.ಎಸ್. ಸಂಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಪದವಿ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡಿದ ಶಿರಸಿ ರೋಟರಿ ನಂತರದಲ್ಲಿ ವಿಶ್ವ ಸೇವಾ ಸಮಿತಿಯ ಮೂಲಕವಾಗಿ ರೋಟರಿ ಕಣ್ಣಿನ ಆಸ್ಪತ್ರೆಯನ್ನು ಸಂಸ್ಥಾಪಿಸಿತು. ನಂತರದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ, ಅವಶ್ಯಕತೆಗಳನ್ನು ಆಧರಿಸಿ ಉಪಗ್ರಹ ರಕ್ತನಿಧಿ, ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶು ಘಟಕ, 118 ಶಾಲೆಗಳಲ್ಲಿ, ಅಂದಾಜು 1 ಕೋ. ರೂ. ವೆಚ್ಚದಲ್ಲಿ ಇ-ಕಲಿಕಾ ಘಟಕಗಳು, ಎಂ.ಇ.ಎಸ್. ಆವರಣದಲ್ಲಿ 58ಲಕ್ಷ ರೂ. ವೆಚ್ಚದಲ್ಲಿ ಮಳೆಕೊಯ್ದು ಮತ್ತು ನೀರಿಂಗಿಸುವ ಘಟಕ, ಒಟ್ಟೂ 6 ಕಡೆಗಳಲ್ಲಿ 40ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಹಿರಿಯ ನಾಗರಿಕರಿಗಾಗಿನ ವ್ಯಾಯಾಮ ಕೇಂದ್ರ, 5 ಸರಕಾರಿ ಶಾಲೆಗಳಲ್ಲಿ ಸುಮಾರು 80 ಲಕ್ಷ ರೂ. ಮೊತ್ತದಲ್ಲಿ ಹ್ಯಾಪಿ ಸ್ಕೂಲ್ ಯೋಜನೆಗಳು, ನಗರದ ಐದು ಕಡೆ 35 ಲಕ್ಷ ರೂ. ಆಂದಾಜು ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಮುಂತಾಗಿ ಅನೇಕ ಜನಹಿತ ಸೌಕರ್ಯಗಳನ್ನು ಒದಗಿಸುತ್ತ ಬಂದಿರುವ ರೋಟರಿ ಸಂಸ್ಥೆ, ಹಂತಹಂತವಾಗಿ ಧನಸಂಚಯ ಮಾಡಿ ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿಯ ‘ನೆಮ್ಮದಿ’ಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಂಕಲ್ಪಿಸಿ 2021ರಲ್ಲಿ ಆಲೆಮನೆ ಉತ್ಸವ ಏರ್ಪಡಿಸಿ ಸುಮಾರು 6.35 ಲಕ್ಷ ರೂ. ಉಳಿಸಿತ್ತು. ನಂತರದ ದಿನಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ವಿದ್ಯುತ್ ಚಿತಾಗಾರ ಸಾಧುವಲ್ಲವೆಂದಾಗಿ, ಸಮಿತಿಯೊಂದಿಗೆ ತೀರ್ಮಾನಕ್ಕೆ ಬಂದು, ಪ್ರಸಕ್ತ ಆದ್ಯತೆಯ ಸೋಲಾರ್ ಪ್ಯಾನಲ್ ಅಳವಡಿಕೆಯ ಅವಶ್ಯಕತೆಗೆ ಸ್ಪಂದಿಸಿ ಸುಮಾರು 15ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಯಾನಲ್ಲುಗಳನ್ನು ಸಮಗ್ರವಾಗಿ ಅಳವಡಿಸಿ ಸಂಪೂರ್ಣವಾಗಿ ಸೌರವಿದ್ಯುತ್ ವ್ಯವಸ್ಥೆ ಮಾಡಿದೆ. 2ನೇ ಆಲೇಮನೆ ಉತ್ಸವದಲ್ಲಿ ರೂ. 5 ಲಕ್ಷಕ್ಕೂ ಹೆಚ್ಚಿನ ಧನ ಸಂಗ್ರಹಮಾಡಿ 4 ಕಡೆ ಪ್ರಯಾಣಿಕರ ಸುಸಜ್ಜಿತ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಯಿತು. ಈ ವರ್ಷ ಕೂಡ 5 ಪ್ಲಾಸ್ಟಿಕ್ ಬಾಟಲಿ ಸಂಗ್ರಹ ಘಟಕಗಳು, 6 ರಸ್ತೆಯ ಸುರಕ್ಷಾ ಬ್ಯಾರಿಕೇಡ್ಗಳು ಹಾಗೂ 3 ಕಡೆಯ ರಸ್ತೆಯ ವಿಭಜಕಗಳಲ್ಲಿ ಗ್ರೀನ್ ಸಿಟಿ-ಕ್ಲೀನ್ ಸಿಟಿ ಯೋಜನೆಯಡಿ ಸಾವಿರಾರು ಗಿಡಗಳನ್ನು ನೆಡಲಾಗಿದೆ. ಮುಂದೆಯೂ ಆದ್ಯತಾನುಸಾರ ಇಂತಹ ಕಾರ್ಯಗಳಲ್ಲಿ ಉಳ್ಳವರ ಸಹಕಾರ ಮತ್ತು ಪ್ರಾಯೋಜಿತ/ಸಹಾಯಾರ್ಥ ಕಾರ್ಯಕ್ರಮಗಳ ಮೂಲಕ ಧನಸಂಗ್ರಹ ಮಾಡಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಿದೆ. ಈ ಹಿನ್ನೆಲೆಯಲ್ಲಿ ವಿಕಾಸಾಶ್ರಮ ಬಯಲಿನಲ್ಲಿ ನಡೆಯುವ ಈ ವರ್ಷದ ಆಲೆಮನೆ ಹಬ್ಬಕ್ಕೆ ಹೆಚ್ಚಿನ ಸಾರ್ವಜನಿಕರು ಸಂಖ್ಯೆಯಲ್ಲಿ ಆಗಮಿಸಿ ಸಮಾಜದ ಕಾರ್ಯಕ್ಕೆ ಕೈ ಜೋಡಿಸಲು ಸಂಘಟಕರು ಕೋರಿದ್ದಾರೆ.