ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳೂ ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರೂ ಕೂಡಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಸಾರ್ವಜನಿಕವಾಗಿ ತಮ್ಮ ಗುರುತನ್ನು ಮರೆ ಮಾಚಲು ಪ್ರಯತ್ನಿಸುವ ಲಿಂಗತ್ವ ಅಲ್ಪ ಸಂಖ್ಯಾತರನ್ನು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಅಧಿಕಾರಿಗಳು, ಮನ ಒಲಿಸಿ, ತಾವೇ ವಿಶೇಷ ಮುತುವರ್ಜಿ ವಹಿಸಿ ಯೋಜನೆಯ ಸೌಲಭ್ಯವನ್ನು ಪಡೆಯಲು ಅವರಿಗೆ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿ, ಯೋಜನೆಯ ವ್ಯಾಪ್ತಿಗೆ ಒಳಪಡಿಸಿ, ಪ್ರತೀ ತಿಂಗಳೂ ಆರ್ಥಿಕ ನೆರವು ಒದಗಿಸುವ ಕಾರ್ಯವನ್ನು ಮಾಡಿದ್ದಾರೆ.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಗುರುತಿನ ಚೀಟಿ ಹೊಂದಿರುವ 8 ಮಂದಿ ಲಿಂಗತ್ವ ಅಲ್ಪ ಸಂಖ್ಯಾತರನ್ನು ಗೃಹಲಕ್ಷಿö್ಮ ಯೋಜನೆಯ ಸೌಲಭ್ಯ ದೊರಕಿಸಲು ನೋಂದಣಿ ಮಾಡಿದ್ದು, ಅದರಲ್ಲಿ ಈಗಾಗಲೇ 7 ಮಂದಿಗೆ ಯೋಜನೆಯು ಮಂಜೂರಾಗಿ ರೂ.2000 ಗಳ ಆರ್ಥಿಕ ಸೌಲಭ್ಯ ದೊರೆಯುತ್ತಿದೆ. ಒಬ್ಬರಿಗೆ ಬ್ಯಾಂಕ್ ನಲ್ಲಿನ ತಾಂತ್ರಿಕ ತೊಂದರೆಯಿಂದ ಸೌಲಭ್ಯ ದೊರೆಯುವಲ್ಲಿ ವಿಳಂಬವಾಗಿದ್ದು, ಸದ್ರಿ ಸಮಸ್ಯೆಯನ್ನು ಪ್ರಸ್ತುತ ಇತ್ಯರ್ಥಪಡಿಸಿದ್ದು, ಮುಂದಿನ ತಿಂಗಳಿಂದ ಅವರಿಗೂ ಯೋಜನೆಯ ನೆರವು ದೊರೆಯಲಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಅಧಿಕಾರಿಗಳು.
ಗೃಹಲಕ್ಷ್ಮಿ ಯೋಜನೆಯಿಂದ ದೊರೆಯುತ್ತಿರುವ ಮೊತ್ತದಲ್ಲಿ ನಾವು ವಾಸಿಸುವ ಮನೆಯ ಬಾಡಿಗೆ ಕಟ್ಟಲು ಮತ್ತು ದಿನಬಳಕೆಯ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಅನುಕೂಲವಾಗಿದೆ. ಗೃಹಲಕ್ಷಿö್ಮಯ ಮೊತ್ತವನ್ನು ಬಳಸಿಕೊಂಡು ಸ್ವಂತ ಉದ್ಯಮ ಮಾಡುವ ಕನಸಿದೆ. ಸಾರ್ವಜನಿಕರೊಂದಿಗೆ ಬೆರೆತು ಗೌರವದಿಂದ ಜೀವಿಸಬೇಕು ಎನ್ನುವ ಆಸೆಯಿದೆ. ಆದರೆ ನಮಗೆ ಇತರೇ ಯಾವುದೇ ಆರ್ಥಿಕ ಮೂಲಗಳಿಲ್ಲದಿರುವುದರಿಂದ ಭಿಕ್ಷಾಟನೆ ಮಾಡಬೇಕಿದೆ. ಭಿಕ್ಷಾಟನೆ ಮಾಡುವುದು ನಮಗೂ ಇಷ್ಠವಿಲ್ಲ. ಯಾರೋ ಲಿಂಗತ್ವ ಅಲ್ಪ ಸಂಖ್ಯಾತರು ಸಾರ್ವಜನಿಕರಿಗೆ ತೊಂದರೆ ಮಾಡಿದರೇ ಎಲ್ಲರನ್ನೂ ಅದೇ ಭಾವನೆಯಿಂದ ನೋಡುವುದು ತಪ್ಪು. ನಾವೂ ಕೂಡಾ ಸ್ವಂತ ಉದ್ಯಮ ಆರಂಭಿಸಲು ಬಹುಮುಖ್ಯವಾಗಿ ನಮಗೆ ಸರಕಾರ ಮತ್ತು ಜಿಲ್ಲಾಡಳಿದಿಂದ ಸ್ವಂತ ವಸತಿ ಹೊಂದಲು ಸಹಾಯದ ಅತೀ ಅವಶ್ಯಕತೆಯಿದೆ. ಈಗಾಗಲೇ ದ.ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ನಿವೇಶನ ನೀಡಿ ಮನೆ ಕಟ್ಟಲು ಸಹಾಯ ಒದಗಿಸಲಾಗಿದೆ. ಅದೇ ರೀತಿ ಇಲ್ಲಿಯೂ ಕೂಡಾ ನಮಗೆ ನೆರವು ದೊರೆತರೆ ಗೃಹಲಕ್ಷಿö್ಮಯ ಮೊತ್ತವನ್ನು ಬಳಸಿಕೊಂಡು ಸ್ವಂತ ಉದ್ಯಮ ಮಾಡಿ, ಗೌರವಯುತ ಜೀವನ ನಡೆಸುತ್ತೇವೆ ಎನ್ನುತ್ತಾರೆ ಜಿಲ್ಲೆಯ ಲಿಂಗತ್ವ ಅಲ್ಪ ಸಂಖ್ಯಾತೆ ಆಯಿಷಾ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 30 ರಿಂದ 50 ಮಂದಿ ಲಿಂಗತ್ವ ಅಲ್ಪ ಸಂಖ್ಯಾತರು ಇರಬಹುದು. ಆದರೆ ಈ ಬಗ್ಗೆ ನಿಖರವಾದ ಸಮೀಕ್ಷೆ ನಡೆಸುವ ಅಗತ್ಯವಿದೆ. ಗೃಹಲಕ್ಷಿö್ಮ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಒದಗಿಸಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅವರಿಗೆ ಟ್ರಾನ್ಸ್ ಜೆಂಡರ್ ಕಾರ್ಡ್, ವಿಳಾಸದ ಪುರಾವೆಗಳು, ಬ್ಯಾಂಕ್ ಖಾತೆಯ ವಿವರಗಳನ್ನು ಮಾಡಿಸಿ, ಯೋಜನೆಗೆ ನೋಂದಣಿ ಮಾಡಲಾಗಿದೆ. ಜಿಲ್ಲೆಯಲ್ಲಿನ ಎಲ್ಲಾ ಅರ್ಹ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಯೋಜನೆಯ ನೆರವು ಒದಗಿಸಲು ಸಿದ್ದವಿದ್ದು, ಲಿಂಗತ್ವ ಅಲ್ಪ ಸಂಖ್ಯಾತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ತಮ್ಮ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿ, ಯೋಜನೆಯ ಪ್ರಯೋಜನ ಪಡೆಯಬೇಕು. ಅವರನ್ನು ಗೃಹಲಕ್ಷಿö್ಮ ಯೋಜನೆಗೆ ನೊಂದಣಿ ಮಾಡಲು ಇಲಾಖೆಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಂಪೂರ್ಣ ನೆರವನ್ನು ನೀಡಲಾಗುವುದು:
ವಿರೂಪಾಕ್ಷ ಗೌಡ ಪಾಟೀಲ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ.