–ಮುಕ್ತಾ ಹೆಗಡೆ
ಈಗೆಲ್ಲಾ “ಲ..ಗೋ..ರಿ” ಏನ್ನುತ್ತಾ ಚೀರುವ ಮಕ್ಕಳು ಕಾಣುವುದು ಬಹಳ ವಿರಳವಲ್ಲವೇ ? ಹೌದು. ಕಾಲ ಕಳೆದಂತೆ ಒಂದಿಷ್ಟು ಸಂಗತಿಗಳು ಕಾಣದಾಗುತ್ತಿವೆ. ಅವುಗಳಲ್ಲಿ ಈ ಗ್ರಾಮೀಣ ಕ್ರೀಡೆಗಳು ಒಂದು. ಚಿನ್ನಿದಾಂಡು, ಗೋಲಿ, ಬುಗುರಿ,ಕುಂಟೆಬಿಲ್ಲೆ ಆಟಗಳನ್ನು ನಾವೀಗ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ನೋಡಬಹುದು ಬಿಟ್ಟರೆ ಬಯಲುಗಳಲ್ಲೋ, ಮೈದಾನಗಳಲ್ಲೋ ಕಾಣುವುದು ಅಪರೂಪವೇ ಆಗಿದೆ.
ಈ ಆಟಗಳು ಹಳ್ಳಿಯ ಕಂದಮ್ಮಗಳನ್ನು ಬೆಸೆಯುತ್ತಿದ್ದವು. ಮಕ್ಕಳು ಮಣ್ಣಿನಲ್ಲಿ ಬಿದ್ದು ಎದ್ದು ಆಡುವಾಗ ಮಣ್ಣಿಗೆ ಹತ್ತಿರವಾಗುತ್ತಿದ್ದರು. ಸಮಯದ ಸದುಪಯೋಗವಾಗುತ್ತಿತ್ತು. ದೈಹಿಕ, ಮಾನಸಿಕ ಬಲಗಳು ಗೊತ್ತಿಲ್ಲದೇ ವರ್ಧಿಸುತ್ತಿದ್ದವು. ಮನರಂಜನೆ ಬಗ್ಗೆಯಂತೂ ಕೇಳಲೇಬೇಕಿಲ್ಲ ಬಿಡಿ. ಆದರೆ ಈಗ ಹಾಗಲ್ಲ. ಮಕ್ಕಳು ನಾಲ್ಕು ಗೋಡೆಗಳ ಒಳಗೆ, ಗ್ರಾಮೀಣ ಆಟಗಳು ನಮ್ಮ ಮನಸ್ಸಿನಿಂದ ಹೊರಗೆ.
ಮರೆಯಾಗುವಾಗುವಾಗ ತಿಳಿಯುವುದಿಲ್ಲ. ಮರೆಯಾದ ಮೇಲೆ ಕಳೆದು ಹೋಯಿತಲ್ಲ ಎನಿಸುತ್ತದೆ. ಈಗ ನಮ್ಮ ಪರಿಸ್ಥಿತಿಯೂ ಹಾಗೇ ಆಗಿದೆ. ಹಳ್ಳಿಗಳಲ್ಲಿ ಕಡಿಮೆ ಆಗುತ್ತಿರುವ ಕೂಡು ಕುಟುಂಬಗಳು, ನಗರದತ್ತ ಧಾವಿಸುತ್ತಿರುವ ಜನರು, ಮೊಬೈಲ್ ನಲ್ಲೆ ಮುಳುಗಿರುವ ಮಕ್ಕಳು ಹೀಗೆ ಇನ್ನೂ ಒಂದಿಷ್ಟು ಕಾರಣಗಳಿಂದ ಗ್ರಾಮೀಣ ಕ್ರೀಡೆಗಳು ಸದ್ದಿಲ್ಲದೇ ಮರೆಯಾಗಿಬಿಟ್ಟವು.
“ಮೊಬೈಲ್ ನು ಬಿಡಿ” ಎಂದು ಮಕ್ಕಳಿಗೆ ಹೇಳಿದಂತೆ, “ಇಂತಹ ಕ್ರೀಡೆಗಳನ್ನು ಆಡಿ” ಎಂದು ಕಲಿಸಬೇಕು. ಇಬ್ಬರೋ, ಮೂವರೋ ಆಡುವ ಪಗಡೆ, ಗೋಲಿಗಳನ್ನು ಸಣ್ಣ ಸ್ಥಳದಲ್ಲಿಯೇ ಆಡಬಹುದು. ಮತ್ತು ಕ್ರೀಡೋತ್ಸವ, ವಾರ್ಷಿಕ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಆಟಗಳನ್ನು ಪರಿಚಯಿಸಿ ಆಡಿಸಬೇಕು.
“ಭಾರತ ಗ್ರಾಮಗಳ ರಾಜ್ಯ” , “ಗ್ರಾಮಾಭಿವೃದ್ಧಿ ರಾಷ್ಟ್ರಾಭಿವೃದ್ಧಿ” ಎಂದು ನಾವು ಹೇಳುತ್ತಿರುತ್ತೇವೆ. ಗ್ರಾಮೀಣ ಪ್ರದೇಶಗಳನ್ನು ಉಳಿಸಲು ಗ್ರಾಮೀಣ ಆಟಗಳನ್ನು ಆಡುವುದು, ಅವುಗಳನ್ನು ಮರೆಯಾಗಲು ಬಿಡದಿರುವುದು ಒಂದು ಪುಟ್ಟ ಪ್ರಯತ್ನವಷ್ಟೆ.