ಸಿದ್ದಾಪುರ: ಮುಂದಿನ ದಿನದಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ನೀಡುವ ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ಮುಖ್ಯ. ಮಕ್ಕಳಿಗೆ ಪ್ರತಿನಿತ್ಯ ಶಿಕ್ಷಣದ ಮಹತ್ವ ಹಾಗೂ ಮೌಲ್ಯವನ್ನು ತಿಳಿಸಬೇಕಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ವಿವಿಧ ಗುಣಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅಂತಹ ಕಾರ್ಯವನ್ನು ಶಿಕ್ಷಣ ಇಲಾಖೆಯೊಂದಿಗೆ ಸ್ಕೋಡ್‌ವೆಸ್ ಸಂಸ್ಥೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ಬಿಇಒ ಎಂ.ಎಚ್.ನಾಯ್ಕ ಹೇಳಿದರು.
ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಕೋಡ್‌ವೆಸ್ ಸಂಸ್ಥೆ ಶಿರಸಿ ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಆರೋಗ್ಯ ಮೇಳ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಇಂದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿಲ್ಲ. ಏಕೆಂದರೆ ಸರ್ಕಾರಿ ಶಾಲೆಯಲ್ಲಿ ಇಂದು ಮಕ್ಕಳಿಗೆ ಯಾವ ಕೊರತೆಯೂ ಇಲ್ಲ. ಶಿಕ್ಷಕರು ಉತ್ತಮವಾಗಿ ಶಿಕ್ಷಣ ನೀಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಕ್ಕಳು ಶಿಕ್ಷಣದಲ್ಲಿ ಸವಾಲನ್ನು ಎದುರಿಸಬೇಕು. ಸವಾಲನ್ನು ಸ್ವೀಕರಿಸಿ ಶಿಕ್ಷಣ ಕಲಿಯಬೇಕಾಗಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರಿತಿಸುವುದರೊಂದಿಗೆ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಾಗಿದೆ. ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಹಲವು ಸಮಸ್ಯೆಗಳಿರುತ್ತಿದ್ದು ಅವುಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ತಿಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ನೂರು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳ ಆರೋಗ್ಯ ಮೇಳ ನಡೆಸುವುದರೊಂದಿಗೆ ಮಕ್ಕಳಿಂದ ವಿಜ್ಞಾನ ಪ್ರದರ್ಶನ ನಡೆಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಎಸ್‌ಡಿಎಂಸಿ ಅಧ್ಯಕ್ಷ ರಘುವೀರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ, ಸಿಆರ್‌ಪಿ ಶೋಭಾ ಡಿ.ಎಸ್, ಮುಖ್ಯಾಧ್ಯಾಪಕಿಯರಾದ ಸುಲೋಚನಾ, ಶಾರದಾ ಉಪಸ್ಥಿತರಿದ್ದರು.ಸಮನ್ವಯಾಧಿಕಾರಿ ಉಮೇಶ ಮರಾಠಿ ಕಾರ್ಯಕ್ರಮ ನಿರ್ವಹಿಸಿದರು. ಸ್ಕೋಡ್‌ವೆಸ್ ಸಂಸ್ಥೆ ಸಿಬ್ಬಂದಿಗಳು ಸಹಕರಿಸಿದರು.
ನಂತರ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಯಿತು ಹಾಗೂ ವಿವಿಧ ಶಾಲಾ ಮಕ್ಕಳಿಂದ ವಿಜ್ಞಾನ ವಸ್ತುಪ್ರದರ್ಶನ ನಡೆಯಿತು.