ಶಿರಸಿ: ಅಂತರರಾಷ್ಟ್ರೀಯ ಸಮಾಜ ಸೇವಾ ಸಂಘಟನೆಯಾದ ಶಿರಸಿ ರೋಟರಿ ಕ್ಲಬ್ ಇದೇ ಪ್ರಥಮ ಬಾರಿಗೆ ನಗರದ ಎಂ.ಇ.ಎಸ್. ವಾಣಿಜ್ಯ ಕಾಲೇಜು ಪ್ರಾಂಗಣದಲ್ಲಿ ರೋಟರಿ ಗಾಳಿಪಟ ಉತ್ಸವ ರವಿವಾರ ಸಂಭ್ರಮದಲ್ಲಿ ಜರುಗಿತು.
ರೋಟರಿ ಕ್ಲಬ್ ನಗರ ಹಾಗೂ ಗ್ರಾಮೀಣ ಭಾಗದ ಶಾಲೆಗಳಲ್ಲಿ ಆರಂಭಿಸಲಾದ ವಿದ್ಯಾರ್ಥಿಗಳ ಇಂಟ್ರಾಕ್ಟ ಕ್ಲಬ್ ಸದಸ್ಯರ ನಡುವೆ ಗಾಳಿಪಟ ಸ್ಪರ್ಧೆಯನ್ನು ಇನ್ನರ್ ವ್ಹೀಲ್ ಕ್ಲಬ್ ಸಹಕಾರದಲ್ಲಿ ನಡೆಯಿತು. ಸಾರ್ವಜನಿಕರಿಗೆ, ರೋಟರಿ ಸದಸ್ಯರಿಗೆ ಮುಕ್ತ ಅವಕಾಶ ನೀಡಲಾಗಿತ್ತು.
ಇನ್ನೂರಕ್ಕೂ ಅಧಿಕ ಗಾಳಿಪಟಗಳನ್ನು ಗಗನಕ್ಕೆ ಹಾರಿಸಲು ಎರಡು ವರ್ಷದ ಪುಟಾಣಿ ಆನ್ಯಾ ಹೆಗಡೆ ಸೇರಿದಂತೆ ಎಪ್ಪತ್ತರ ವಿಷ್ಣು ಹೆಗಡೆ ಭಾಗವಹಿಸಿದ್ದರು. ಮಹಿಳೆಯರು, ಯುವಕರು, ವೈದ್ಯರು, ಲೆಕ್ಕಪರಿಶೋಧಕರು, ವರ್ತಕರು, ಶಿಕ್ಷಕರು ಮುಂತಾಗಿ ಅನೇಕರು ಈ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಭಾರತದ ರಾಷ್ಟ್ರಧ್ವಜ ಮಾದರಿಯ ಗಾಳಿಪಟ ಅತ್ಯಂತ ಎತ್ತರಕ್ಕೆ ಹಾರಿದ್ದು, ಅದನ್ನು ನೋಡಲು ಸಾರ್ವಜನಿಕರೂ ಆಸಕ್ತಿಯಿಂದ ಭಾಗವಹಿಸಿದ್ದರು. ಕಿವುಡ ಮತ್ತು ಮೂಕ ಶಾಲೆಯ ಐವತ್ತರಷ್ಟು ಮಕ್ಕಳೂ ಭಾಗವಹಿಸಿದ್ದರು.
ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಹಾಗೂ ಅದು ತರುವ ಆತಂಕದಲ್ಲಿ ಗ್ರಾಮೀಣ ಭಾಗದ ಗಾಳಿಪಟಕ್ಕೆ ಉತ್ಸವದ ಮೆರಗು ನೀಡಲು ಯೋಜಿಸಿದ್ದೆವು, ಇಂಟ್ರಾಕ್ಟ ಕ್ಲಬ್ ಮಧ್ಯೆ ಸ್ಪರ್ಧೆ ಕೂಡ ನಡೆಸಿದೆವು. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು ಎನ್ನುತ್ತಾರೆ ರೋಟರಿ ಅಧ್ಯಕ್ಷೆ ಡಾ. ಸುಮನ್ ಹೆಗಡೆ.
ಮಾರಿಕಾಂಬಾ ಪ್ರೌಢ ಶಾಲೆಯ ನಜೀರ್ ತಂಡ ಪ್ರಥಮ, ತೇಲಂಗ ಪ್ರೌಢಶಾಲೆಯ ಶಂಕರ ತಂಡ ದ್ವಿತೀಯ, ತೃತೀಯ ಸ್ಥಾನವನ್ನು ತೇಲಂಗದ ವಿಕಾಸ ತಂಡ ಪಡೆದರು. ಸಮಾಧಾನಕರವಾಗಿ ತೇಲಂಗದ ರಾಹುಲ್ ಗೊಲ್ಲರ, ಶ್ರೀನಿಕೇತನದ ಅವನಿ, ಮಾರಿಕಾಂಬಾದ ವಿಫುಲ್ , ಕೂರ್ಸೆ ಶಾಲೆಯ ಗಾಯನ ಅವರು ಬಹುಮಾನ ಪಡೆದರು.
ಕ್ಲಬ್ ಕಾರ್ಯದರ್ಶಿ ಸರಸ್ವತಿ ಎನ್. ರವಿ, ಖಜಾಂಚಿ ವಿನಾಯಕ ಜೋಶಿ, ಕಾರ್ಯನಿರತ ಕಾರ್ಯದರ್ಶಿ ವಿನಯ ಹಿರೇಮಠ, ಇನ್ನರ್ ವೀಲ್ ಅಧ್ಯಕ್ಷೆ ರೇಖಾ ಅನಂತ್, ಪೂರ್ಣಿಮಾ ಶೆಟ್ಟಿ, ಯುವ ಜನಾಂಗ ನಿರ್ದೇಶಕ ಹರೀಶ ಹೆಗಡೆ, ವರುಣ್ ವಿಷ್ಣು ಹೆಗಡೆ ಇತರರು ಇದ್ದರು. ನಿರ್ಣಾಯಕರಾಗಿ ಗೋಳಿ ಪ್ರೌಢಶಾಲೆಯ ಗಣೇಶ ಹೆಗಡೆ, ರೇಖಾ ಸತೀಶ ಹೆಗಡೆ, ದೀಪ್ತಿ ಖೋನಾ ಪಾಲ್ಗೊಂಡರು.
ಪಾಲ್ಗೊಂಡ ಎಲ್ಲರಿಗೆ ಬೆಳಗಿನ ಉಪಾಹಾರ, ಹಣ್ಣು, ಬಿಸ್ಕೇಟ್ ನೀಡಲಾಗಿತ್ತು. ಬಯಲಿನಲ್ಲಿ ಬಿದ್ದ ತ್ಯಾಜ್ಯವನ್ನೂ ಎತ್ತುವ ಮೂಲಕ ಸ್ವಚ್ಛ ಬದ್ಧತೆಯ ಉತ್ಸವ ಎಂಬುದನ್ನು ಸಾರುವಂತಿತ್ತು ಎಂಬುದೂ ಉಲ್ಲೇಖನೀಯ ಎಂಬುದಾಗಿ ಶಿರಸಿ ರೋಟರಿ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಗಡಿಹಳ್ಳಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಾಕ್ಸ್
ನಿರೀಕ್ಷೆ ಇರಲಿಲ್ಲ ಇಷ್ಟೊಂದು ಪ್ರತಿಕ್ರಿಯೆ ಬರುತ್ತದೆ ಎಂದು. ಮಕ್ಕಳು, ಪಾಲಕರು, ಬೇರೆ ಬೇರೆ ವೃತ್ತಿನಿರತರು ಉತ್ಸಾಹದಲ್ಲಿ ಭಾಗವಹಿಸಿದ್ದು ಮುಂದಿನ ವರ್ಷದಲ್ಲಿ ಇನ್ನೂ ವಿಸ್ತಾರವಾಗಿ ಸಂಘಟಿಸಲು ಪ್ರೇರಣೆ ನೀಡಿದೆ.–
ಡಾ. ಸುಮನ್ ಹೆಗಡೆ, ಅಧ್ಯಕ್ಷರು, ರೋಟರಿ ಕ್ಲಬ್, ಶಿರಸಿ
ರಾಷ್ಟ್ರ ಧ್ವಜ ಮಾದರಿ ಗಾಳಿಪಟ ಅತ್ಯಂತ ಎತ್ತರಕ್ಕೆ ಹಾರಿದ್ದಲ್ಲದೇ ಪ್ರಥಮ ಬಹುಮಾನ ಪಡೆದಿದ್ದು ಖುಷಿ ತಂದಿದೆ.
-ನಜೀರ್ ರಹೀಂ ಖಾನ್, ವಿದ್ಯಾರ್ಥಿ ಮಾರಿಕಾಂಬಾ ಪ್ರೌಢಶಾಲೆ, ಶಿರಸಿ