Slide
Slide
Slide
previous arrow
next arrow

ಪ್ರವಾಸಕ್ಕೆಂದು ಬಂದಿದ್ದ ಬಾಲಕ ಬಾವಿಗೆ ಬಿದ್ದು ಸಾವು

300x250 AD

ಭಟ್ಕಳ: ಶಾಲೆಯಿಂದ ಆಯೋಜಿಸಲಾಗಿದ್ದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ಸುಮಾರಿಗೆ ಭಟ್ಕಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಗಾಣದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (೧೪) ಮೃತ ದುರ್ದೈವಿ. ಭಟ್ಕಳದ ತಾಲೂಕು ಪಂಚಾಯತ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆಂದು ಹೋದಾಗ ತೆರೆದ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಗಾಣದಾಳ ಶಾಲೆಯ ೧೦೦ ವಿದ್ಯಾರ್ಥಿಗಳು ಜೋಗ ಫಾಲ್ಸ್, ಕೊಲ್ಲೂರು ಮತ್ತಿತರ ಕಡೆ ಪ್ರವಾಸಕ್ಕೆಂದು ಎರಡು ಬಸ್ಸುಗಳಲ್ಲಿ ಬಂದಿದ್ದರು. ಇವರೊಂದಿಗೆ ೧೩ ಜನ ಶಿಕ್ಷಕರಿದ್ದರು. ನಿನ್ನೆ ರಾತ್ರಿ ಗಾಣದಾಳದಿಂದ ಹೊರಟಿದ್ದ ವಿದ್ಯಾರ್ಥಿಗಳು ಜೋಗ ಜಲಪಾತ ವೀಕ್ಷಿಸಿ, ಅಲ್ಲಿಂದ ಕೊಲ್ಲೂರಿಗೆ ತೆರಳಲು ಅರಬೈಲ್ ಘಟ್ಟದ ಮೂಲಕ ಹೊನ್ನಾವರ ಮಾರ್ಗವಾಗಿ ತೆರಳುತ್ತಿದ್ದರು. ಮಾರ್ಗ ಮಧ್ಯ ಭಟ್ಕಳದಲ್ಲಿ ತಾಲೂಕು ಪಂಚಾಯತ್ ಕಚೇರಿ ಎದುರಿನ ಔಷಧಿ ಅಂಗಡಿಯಲ್ಲಿ ಗುಳಿಗೆ ಖರೀದಿಸಲು ವಾಹನ ನಿಲ್ಲಿಸಲಾಗಿತ್ತು.

300x250 AD

ಈ ವೇಳೆ ಕೆಲವು ಬಾಲಕರು ಮೂತ್ರ ವಿಸರ್ಜನೆಗೆಂದು ಔಷಧಿ ಅಂಗಡಿಯ ಹಿಂದಿರುವ ಖುಲ್ಲಾ ಜಾಗಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಬಾಲಕ ಬಿದ್ದಿದ್ದಾನೆ. ತಕ್ಷಣ ಜೊತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಸ್ಪಂದಿಸದೆ ಮೃತಪಟ್ಟಿದ್ದನು.

ಸ್ಥಳಕ್ಕೆ ತಹಶಿಲ್ದಾರರ ನಾಗೇಂದ್ರ ಶೆಟ್ಟಿ ,ಡಿ.ವೈ.ಎಸ್.ಪಿ ಮಹೇಶ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ನಂತರ ಸಹಾಯಕ ಆಯುಕ್ತರು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಶಿಕ್ಷಕರ ಜೊತೆ ಮಾತು ಕತೆ ನಡೆಸಿ ನಂತರ ವಿದ್ಯಾರ್ಥಿಗಳನ್ನು ಹಾಗು ಶಿಕ್ಷಕರನ್ನು ಹೆಬಳೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಂಗಲು ವ್ಯವಸ್ಥೆಯನ್ನು ಕಲ್ಪಿಸಿದ್ದರು

Share This
300x250 AD
300x250 AD
300x250 AD
Back to top