ಶಿರಸಿ : ಸ್ವಾತಂತ್ರ್ಯೋತ್ತರ ಗ್ರಾಮ ಭಾರತದ ಸಾಂಪ್ರದಾಯಿಕ ಮತ್ತು ಆಧುನಿಕ ಹಿಂಸೆಯ ಸ್ಥಿತ್ಯಂತರಗಳ ಬಿಕ್ಕಟ್ಟನ್ನು ತೋರುವ, ಮನುಷ್ಯನ ಘನತೆಯನ್ನು ಜತನದಿಂದ ಕಾಪಾಡಿಕೊಳ್ಳುವ, ಪಾತ್ರಗಳ ಸ್ವಾಯತ್ತತೆಯನ್ನು ಗೌರವಿಸುತ್ತ ಪ್ರಪಂಚವನ್ನು ತೀರ್ಮಾನಿಸದೆ ತಿಳಿಯುವ ಪ್ರಬುದ್ಧತೆಯಿಂದ ಬರೆಯುತ್ತಿರುವ ಶ್ರೀಧರ ಬಳಗಾರರು ನಮ್ಮ ನಡುವಿನ ಕನ್ನಡದ ಅತ್ಯುತ್ತಮ ಕತೆಗಾರರಲ್ಲೊಬ್ಬರು ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ನುಡಿದರು.
ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘ, ಮತ್ತು ಅಕ್ಷರ ಮಂಟಪ ಪ್ರಕಾಶನ, ಇವುಗಳ ಆಶ್ರಯದಲ್ಲಿ ಜರುಗಿದ ಶ್ರೀಧರ ಬಳಗಾರರ ‘ಮೊದಲ ಮೂರು ಕಥಾ ಸಂಕಲನಗಳ ಮರು ಓದು’ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.
ಕವಿ ಹಾಗೂ ಕಥೆಗಾರ ಚಿಂತಾಮಣಿ ಕೊಡ್ಲೆಕೆರೆ ಮಾತಾಡಿ ಹರಿಯುವ ಗುಣದಿಂದ ನೀರು ನದಿಯಾಗಿರುವಂತೆ ಬಳಗಾರರ ಬರವಣಿಗೆ ನನ್ನನ್ನು ಆವರಿಸಿದೆ. ಪ್ರಕೃತಿ ಮತ್ತು ಮನುಷ್ಯ ಸಂಬಂಧ ಆವರ ಕತೆಗಳಲ್ಲಿ ರಮಣೀಯವಷ್ಟೇ ಅಲ್ಲ, ರುದ್ರವೂ ಹೌದು. ಬಳಗಾರರ ಕತೆಗಳನ್ನು ಪ್ರಕೃತಿಯೆ ಬರೆಯಿಸಿಕೊಂಡಂತಿದೆ. ಸಂಪ್ರದಾಯದ ಚೌಕಟ್ಟನ್ನು ಮೀರುವ ಆದರೆ ರಾಷ್ಟ್ರೀಯವಾದಿಗಳ ಮತ್ತು ಪ್ರಗತಿವಾದಿಗಳ ಅಥವಾ ಮಧ್ಯಮಾರ್ಗವನ್ನೂ ಆಯ್ದುಕೊಳ್ಳದ ಅವರ ಕತೆಗಳು ವಿಷಾದಪೂರ್ಣ ವಸ್ತುನಿಷ್ಠ ಜಗತ್ತನ್ನು ಚಿತ್ರಿಸುತ್ತವೆ ಎಂದರು.
ಪತ್ರಕರ್ತ ಹಾಗೂ ವಿಮರ್ಶಕ ಚ.ಹ. ರಘುನಾಥ ಮಾತಾಡಿ ಜನ ಮೆಚ್ಚಿಸಲು ಸಿದ್ಧಗೊಂಡ ಮಾದರಿಗಳನ್ನು ಮುರಿಯುವ ಬಳಗಾರರ ಕಥೆಗಳು ಬದುಕಿನ ಸಂಕಟ ಮತ್ತು ಪಲ್ಲಟಗಳನ್ನು ಸಮಗ್ರವಾಗಿ ಶೋಧಿಸುತ್ತವೆ. ಮನುಷ್ಯರೇ ಆವರಿಸಿಕೊಂಡಿರುವ ಒಂಟಿತನದ ವಿಷಾದ ಕತೆಗಳ ಸ್ಥಾಯಿ ಭಾವವಾಗಿದೆ. ಚರಿತ್ರೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಉಳ್ಳವರು ದಮನಿತರ ದನಿಯನ್ನು ಅಡಗಿಸಿದ ಹೊತ್ತಿನಲ್ಲಿ ಅಸಹಾಯಕ ಒಂಟಿತನಕ್ಕೆ ಸಿಲುಕಿರುವವರಿಗೆ ಬಳಗಾರರ ಕತೆಗಳು ಜೀವಶಕ್ತಿಯನ್ನು ತುಂಬುತ್ತವೆ. ಭಾಷೆಯ ಕಾವ್ಯಮಯ ಧ್ವನಿ ಶಕ್ತಿಯಿಂದ ಸಮಕಾಲೀನ ಪ್ರಸ್ತುತತೆಯು ಪ್ರಾಪ್ತವಾಗಿದೆ. ಪ್ರಾದೇಶಿಕವಾಗಿದ್ದೂ ಜಾಗತಿಕ ವಿದ್ಯಮಾನಗಳನ್ನು ಮುಖಾಮುಖಿಯಾಗುವ ಸವಾಲನ್ನು ಬಳಗಾರರು ಭಿನ್ನವಾಗಿ ನಿರ್ವಹಿಸುವುದರಿಂದ ಮುಖ್ಯರಾಗುತ್ತಾರೆ ಎಂದರು.
ಕಥಾ ಬರವಣಿಗೆಗೆ ತೊಡಗಿಕೊಂಡ ದಿನಗಳಲ್ಲಿ ಮುಗ್ಧ ತನ್ಮಯತೆ, ಬೆರಗು ತುಂಬಿತ್ತು. ಸಮಾಜದಲ್ಲಿ ಜರುಗುತ್ತಿರುವ ಪರಿವರ್ತನೆಗಳ ಕುರಿತು ವಿಷಾದವಿತ್ತು, ಒಂಟಿತನ ಕಾಡುತ್ತಿತ್ತು. ಆದರೆ ಇಂಥ ಬದಲಾವಣೆಗಳ ಮೂಲಕವೇ ಶಾಶ್ವತವಾದುದು ಉಳಿದುಕೊಳ್ಳಲು ಸಾಧ್ಯ ಎಂದು ಈಗ ಅರಿವಾಗುತ್ತಿದೆ. ಖಾಸಗಿ ಮತ್ತು ಸಾರ್ವತ್ರಿಕ ಸಂಗತಿಗಳಲ್ಲದೆ ಹೇಳಲಾಗದ ಗುಟ್ಟುಗಳ ಜಗತ್ತೂ ಒಳಗಿದೆ. ಕಥೆ ಇದೆಲ್ಲವನ್ನೂ ಒಳಗೊಂಡ ನದಿ.. ಎಂದು ಕಥೆಗಾರ ಶ್ರೀಧರ ಬಳಗಾರರು ತಮ್ಮ ಕಥಾ ಬರವಣಿಗೆಯ ಕುರಿತು ನುಡಿದರು.
ಜಯಲಕ್ಷ್ಮಿ ಪಾಟೀಲ ಮತ್ತು ದಾದಾಪೀರ ಜೈಮನ್ ಬಳಗಾರರ ಒಂದು ಕತೆಯನ್ನು ವಾಚಿಸಿದರು.ಶ್ರೀಮತಿ ಭ್ರಮರಾಂಬಾ ಸುಬ್ಬರಾಂ ಮತ್ತು ಶ್ರೀಮತಿ ಶೈಲಜಾ ಪ್ರಾರ್ಥನೆ ಹಾಡಿದರು. ಭೂಮಿ ಬುಕ್ಸ್ ಪ್ರಕಾಶಕಿ ಶ್ರೀಮತಿ ವಿಶಾಲಾಕ್ಷಿ ಶರ್ಮ ಪರಿಸರ ಪಾಠ ನೆರವೇರಿಸಿದರು, ಸರೋಜಾ ಬಳಗಾರ ಗೌರವ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಅಕ್ಷರ ಮಂಟಪ ಪ್ರಕಾಶಕರು ಕಥೆಗಾರ ಶ್ರೀಧರ ಬಳಗಾರವರನ್ನು ಸನ್ಮಾನಿಸಿದರು.
ಕಾದಂಬರಿಗಾರ್ತಿ ಶೋಭಾ ಹೆಗಡೆಯವರು ಕಾರ್ಯಕ್ರಮ ನಿರ್ವಹಿಸಿದರು. ಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಕವಿಗಳಾದ ಸಿದ್ದಣ್ಣ ಸೊನ್ನದ, ಕೊಪ್ಪರಂ ಅನ್ನಪೂರ್ಣ,ಡಾ.ಕಲ್ಪನಾ. ಪ್ರಭಾಕರ ಗಂಗೊಳ್ಳಿ, ಪತ್ತಂಗಿ ಮುರಳಿ, ರಮಾನಂದ, ಸಂಘದ ಹಿರಿಯ ಸದಸ್ಯರಾದ ಬಿ ಸತ್ಯನಾರಾಯಣ, ಉಲಿಗೇಸ್ವಾಮಿ, ಕೃಷ್ಣಮೂರ್ತಿ, ಕೊಟ್ಟೂರ ಮುಂತಾದ ಗಣ್ಯರು ಉಪಸ್ಥಿತರಿದ್ದರು.