ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕಲಾಂಜಲಿ ಕಾರ್ಯಕ್ರಮ: ಗಣ್ಯರ ಉಪಸ್ಥಿತಿ
ಕುಮಟಾ : ಪ್ರಾರಂಭದಲ್ಲಿ ನನ್ನ ಮೇಲೆಯೇ ನನಗೆ ಕೀಳರಿಮೆ ಇತ್ತು. ಎಲ್ಲ ವಿಷಯದಲ್ಲಿಯೂ ಕೀಳರಿಮೆಯಿಂದ ನಾನು ಹಿಂದೆ ಉಳಿಯುತ್ತಿದೆ. ಆದರೆ ಯಾವುದೋ ಒಂದು ಹಂತದಲ್ಲಿ ಎಲ್ಲವನ್ನು ಎದುರಿಸಿ ಮುನ್ನಡೆಯಬೇಕೆಂಬ ಮನಃಪರಿವರ್ತನೆಯ ನಂತರದಲ್ಲಿ ನಾನು ಕಾರ್ಯೋನ್ಮುಖಳಾದೆ. ಇದರಿಂದ ಸಾಧನೆ ಸಾಧ್ಯವಾಯಿತು. ನಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ನಾವು ಕಾರ್ಯೋನ್ಮುಖರಾದಾಗ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಖ್ಯಾತ ಚಲನಚಿತ್ರ ನಟಿ, ರಂಗಕರ್ಮಿ, ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಅಭಿಪ್ರಾಯ ಪಟ್ಟರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿ, ಆಶಯ ನುಡಿಗಳನ್ನಾಡಿದರು.
ಬದುಕಿನಲ್ಲಿ ಕಲೆಯನ್ನು ನೆಚ್ಚಿಕೊಂಡವಳು ನಾನು. ಕಲಾವಿದೆಯಾಗಿ ಕಲಾ ಪ್ರಪಂಚಕ್ಕೆ ತೆರೆದುಕೊಳ್ಳುವಲ್ಲಿ ನನ್ನದಷ್ಟೇ ಪ್ರಯತ್ನಗಳಿಲ್ಲ. ಅದರ ಹಿಂದೆ ಹಲವರು ಕಾರ್ಯ ಮಾಡಿದ್ದಾರೆ. ಕಾಂತಾರ ಚಲನಚಿತ್ರದಲ್ಲಿ ನಾನು ಪಾತ್ರ ಮಾಡಿದರೂ, ಪಾತ್ರದ ಹಿಂದೆ ನಿರ್ದೇಶಕರು ಚಿತ್ರತಂಡ ಸಂಪೂರ್ಣ ಕಾರ್ಯನಿರ್ವಹಿಸಿದೆ. ನಾನು ಯೂಟ್ಯೂಬ್ ನ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದರು ಆ ವಿಡಿಯೋಗಳನ್ನು ಮಾಡಲು ನನಗೆ ಸಹಕಾರ ನೀಡಿದವರು ನನ್ನ ಕುಟುಂಬದ ಸದಸ್ಯರು. ಅವರೆಲ್ಲರೂ ನನ್ನ ಸಾಧನೆಯ ಭಾಗವಾಗಿರುವುದರಿಂದ ಎಲ್ಲಾ ಗೌರವ ಸನ್ಮಾನಗಳನ್ನು ನನ್ನ ಜೊತೆಗಿರುವ ಕಲಾತಂಡಕ್ಕೆ ಹಾಗೂ ನನ್ನ ಹಿತೈಷಿಗಳಿಗೆ ಅರ್ಪಣೆ ಮಾಡುತ್ತೇನೆ ಎಂದು ಅವರ ಅಭಿಪ್ರಾಯಪಟ್ಟರು.
ಉತ್ತರ ಕನ್ನಡದವರು ಪ್ರತಿಭಾನ್ವಿತರು. ಸದಾ ಪ್ರಯತ್ನಶೀಲರು. ಉತ್ತರ ಕನ್ನಡದ ಜನರು ನನ್ನನ್ನು ಅತಿ ಹೆಚ್ಚು ಪ್ರೀತಿಸಿದವರು. ನನಗೆ ಅತಿ ಹೆಚ್ಚಿನ ಪ್ರಚಾರ ಕೊಟ್ಟವರು. ಉತ್ತರ ಕನ್ನಡದವರ ನಿರ್ದೇಶನದಲ್ಲಿ ನಾನು ರಂಗಕರ್ಮಿಯಾಗಿ ಮೂಡಿಬಂದಿದ್ದು ನನ್ನ ಬದುಕಿನ ಸಾರ್ಥಕತೆ, ಹಾಗಾಗಿ ಉತ್ತರ ಕನ್ನಡಕ್ಕೆ ಬರಲು ಸಂತೋಷವೆನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಕಥನ ಹಾಗೂ ಹಾಡುಗಳ ಮೂಲಕ ಅಭಿನಯ ಮಾಡಿ ತೋರಿಸಿ ಮಕ್ಕಳ ಹಾಗೂ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದ ಅವರು, ತನ್ನ ಕಲಾ ಜೀವನದ ಅನೇಕ ಘಟನಾವಳಿಗಳನ್ನು ಸ್ಮರಿಸಿಕೊಂಡರು.
ವಿಧಾತ್ರಿ ಅಕಾಡೆಮಿಯವರು ನಡೆಸುತ್ತಿರುವ ಸರಸ್ವತಿ ಪದವಿ ಪೂರ್ವ ಕಾಲೇಜಿಗೆ ಕಾಲಿಟ್ಟ ತಕ್ಷಣ ಇದೊಂದು ಸರಸ್ವತಿ ಮಂದಿರ ಎನ್ನುವಂತೆ ಭಾಸವಾಯಿತು. ಇಲ್ಲಿಯ ಜನರ ಪ್ರೀತಿಯ ಸ್ವಾಗತಕ್ಕೆ ನಾನು ಮನಸೋತಿದ್ದೇನೆ. ವಿದ್ಯಾರ್ಥಿಗಳ ಕಲೆ ಹಾಗೂ ಕಾರ್ಯಕ್ರಮದ ರೂಪುರೇಷೆ ಕಂಡು ಮೈಮನ ಪುಳಕಗೊಂಡಿತು. ಎಲ್ಲಿ ಕಲಾರಾಧನೆ ನಡೆಯುತ್ತದೆಯೋ ಆ ಸಂಸ್ಥೆ ಬೆಳೆಯುತ್ತದೆ. ಶಿಕ್ಷಣ ಕೇವಲ ಬಾಯಿಪಾಠವಲ್ಲ. ಜೊತೆಗೆ ಸರ್ವತೋಮುಖ ಅಭಿವೃದ್ಧಿಯ ದಿಸೆಯಲ್ಲಿ ಪ್ರಯತ್ನ ಸಾಗುತ್ತಿರುವುದು ಸಂತಸದ ವಿಚಾರ ಎಂದು ಅವರ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಉಪನ್ಯಾಸಕ ಡಾ. ಆರ್. ಜಿ ಗುಂದಿ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶಾರದಾ ಮೊಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂತಹ ವೇದಿಕೆಯಲ್ಲಿ ನಮ್ಮನ್ನು ಗುರುತಿಸಿ ಗೌರವಿಸಿರುವುದು ಬದುಕಿನ ಸಾರ್ಥಕತೆ ಎಂದು ಅಭಿಪ್ರಾಯಪಟ್ಟರು. ಅಮೇರಿಕಾದಲ್ಲಿ ಇಂಜನೀಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಅಶೋಕ ಪ್ರಭು ವೇದಿಯೆಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಬದುಕಿನ ಆಸರೆಯಾಗಿದ್ದಾರೆ. ನಮ್ಮ ಬದುಕಿನ ದಾರಿದೀಪ ಶಿಕ್ಷಕರು. ಅವರನ್ನು ಸದಾ ಸ್ಮರಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಉತ್ತರ ಕನ್ನಡದವರು ಉತ್ತಮರನ್ನು ಹುಡುಕಿ ಅವರ ಬೆನ್ನು ತಟ್ಟಿ ಅವರ ಕಲೆಗೆ ಪ್ರೋತ್ಸಾಹಿಸಿದವರು. ತಾವು ಮಾಡಲಾಗದ ಸಾಧನೆಯನ್ನು ಇನ್ನೊಬ್ಬರು ಮಾಡಿದರೆ ಅವರ ಜೊತೆಗೆ ನಿಂತು ಸಂಭ್ರಮ ಪಡುವವರು ನಾವು. ಕಲಾವಿದರು, ಶೈಕ್ಷಣಿಕ ರಂಗ ಹಾಗೂ ಇಂತಹ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡವನ್ನು ಹತ್ತಿರವಾಗಿಸಿದ ಕೀರ್ತಿ ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಕಲೆಯನ್ನು ಪರಿಚಯಿಸುವ, ಕಲಾವಿದರನ್ನು ಗೌರವಿಸುವ ಹಾಗೂ ಮಕ್ಕಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ಕರೆತಂದು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಕ್ಕಳಿಗೂ ಸಾಧನೆಗೆ ಸ್ಪೂರ್ತಿ ನೀಡುವ ಹಿನ್ನೆಲೆಯಲ್ಲಿ ಕಲಾಂಜಲಿ ರೂಪ ತಾಳಿದ್ದು, ಕಳೆದ ನಾಲ್ಕು ವರ್ಷಗಳಿಂದ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಕಿರಣ ಭಟ್ಟ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಸುಜಾತ ಹೆಗಡೆ ವೇದಿಕೆಯಲ್ಲಿದ್ದರು. ಗಣೇಶ ಜೋಶಿ ನಿರೂಪಿಸಿದರು. ಚಿದಾನಂದ ಭಂಡಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಲಾಂಜಲಿಯ ನಿಮಿತ್ತ ತಾಲೂಕಿನ ಹಾಗೂ ಹತ್ತಿರದ ಕೆಲ ಪ್ರೌಢಶಾಲೆಗಳಿಗೆ ನಡೆಸಿದ ವಿಜ್ಞಾನ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕರು ಗಣಕ ವಿಜ್ಞಾನ ಉಪನ್ಯಾಸಕರಾದ ಗುರುರಾಜ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು. ನಂತರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು. ಊರಿನ ಗಣ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.