ಹೊನ್ನಾವರ : ಹೊನ್ನಾವರ ಅರಣ್ಯ ವಿಭಾಗದ ಹೊನ್ನಾವರ ಅರಣ್ಯ ವಲಯದಲ್ಲಿ ಚಿಕ್ಕನಕೋಡ ಗ್ರಾಮದ ಅರಣ್ಯ ಸ.ನಂ.251 ನೇದರ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳು ಗಸ್ತು ಸಂಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಚಿಕ್ಕನಕೋಡಿನ ರಾಜು ತಿಪ್ಪಯ್ಯ ನಾಯ್ಕ ಇವರು ದಟ್ಟ ಅರಣ್ಯದಲ್ಲಿ 05-28-00 ಎಕರೆ ಕ್ಷೇತ್ರ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಅತಿಕ್ರಮಣ ಮಾಡಿ ಅನಧೀಕೃತವಾಗಿ ಬೇಲಿ ನಿರ್ಮಿಸಿ ಅಡಿಕೆ, ತೆಂಗು ಸಸಿಗಳನ್ನು ನೆಟ್ಟಿರುವುದು ಕಂಡು ಬಂದಿರುತ್ತದೆ ಎಂದು ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಈ ಕುರಿತು ಅವರಿಗೆ ನೋಟೀಸು ನೀಡಲಾಗಿದ್ದು ಅರಣ್ಯ ಹಕ್ಕು ಸಮಿತಿಗೆ ಸಂಬಂಧಿಸಿದಂತೆ 0-10-0 ಗುಂಟೆ ವಿಸ್ತೀರ್ಣದ ಜಿ.ಪಿ.ಎಸ್ ಮಾಡಲಾದ ಒಂದು ನಕಾಶೆ ಹಾಗೂ 05-28-00 ಎಕರೆ ವಿಸ್ತೀರ್ಣದ ಮತ್ತೊಂದು ಜಿ.ಪಿ.ಎಸ್ ನಕಾಶೆಯನ್ನು ನೀಡಿರುತ್ತಾರೆ. 0-10-0 ಗುಂಟೆ ವಿಸ್ತೀರ್ಣದ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಸಲ್ಲಿಸಿದ್ದು ಇದರಲ್ಲಿ ವಾಸ್ತವ್ಯದ ಮನೆ ಹಾಗೂ ಅಡಿಕೆ, ತೆಂಗು ಇದ್ದು ಅರ್ಜಿಯು ಅರಣ್ಯ ಹಕ್ಕು ಸಮಿತಿಯಲ್ಲಿ ಒಂದು ಬಾರಿ ತಿರಸ್ಕೃತಗೊಂಡಿದ್ದು ಮತ್ತೊಂದು ಬಾರಿ ಪರಿಶೀಲನೆ ಹಂತದಲ್ಲಿರುತ್ತದೆ.
ಇನ್ನುಳಿದಂತೆ ಹೆಚ್ಚುವರಿಯಾಗಿ ಇರುವ 05-28-0 ಎಕರೆ ಕ್ಷೇತ್ರದ ಜಿ.ಪಿ.ಎಸ್ ನಕಾಶೆಯನ್ನು ಪರಿಶೀಲಿಸಲಾಗಿ ಅದು ಝೆರಾಕ್ಸ್ ಪ್ರತಿಯಾಗಿದ್ದು ಕೇವಲ ಉಪ ವಲಯ ಅರಣ್ಯ ಅಧಿಕಾರಿ, ಹಡಿನಬಾಳ ಶಾಖೆ ಇವರ ಸಹಿ ಮಾತ್ರ ಇದ್ದು ವಲಯ ಅರಣ್ಯ ಅಧಿಕಾರಿ ಸಹಿಯಾಗಲೀ ಮತ್ತು ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರ ಸಹಿಯಾಗಲೀ ಇರುವುದಿಲ್ಲ. ಹಾಗೂ ಉಪ ವಲಯ ಅರಣ್ಯ ಅಧಿಕಾರಿ, ಹಡಿನಬಾಳ ಶಾಖೆ ಇವರ ಸಹಿಯಲ್ಲಿಯೂ ವ್ಯತ್ಯಾಸವಿರುವುದು ಕಂಡು ಬಂದಿರುತ್ತಿದೆ. ಮೇಲ್ನೋಟಕ್ಕೆ ಇದು ನಿಯಮಬಾಹಿರವಾಗಿ ಅಕ್ರಮ ದಾಖಲೆ ಸೃಷ್ಟಿಸಿರುವಂತೆ ಕಂಡು ಬಂದಿರುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಾಗಿ 4 ಅಕ್ಟೊಬರ್ 2004 ರಂದು ವಲಯ ಅರಣ್ಯಾಧಿಕಾರಿ, ಹೊನ್ನಾವರ ಇವರು ಅರಣ್ಯ ಹಕ್ಕು ಸಮಿತಿಯ ನೋಡಲ್ ಇಲಾಖೆಯಾದ ಹೊನ್ನಾವರ ಸಮಾಜ ಕಲ್ಯಾಣ ಇಲಾಖೆಗೆ ರಾಜು ತಿಪ್ಪಯ್ಯ ನಾಯ್ಕ ಚಿಕ್ಕನಕೋಡ ಇವರು ಅರಣ್ಯ ಸ.ನಂ.251 ನೇದರಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006ರಡಿಯಲ್ಲಿ ಅತಿಕ್ರಮಣ ಕ್ಷೇತ್ರದ ಕುರಿತಾಗಿ ಮೋಜಣಿ ಮಾಡಿದ ಕ್ಷೇತ್ರದ ಜಿ.ಪಿ.ಎಸ್ ನಕಲು ಪ್ರತಿಯನ್ನು ಒದಗಿಸುವಂತೆ ಕೋರಿ ಪತ್ರ ಬರೆಯಲಾಗಿ, ರಾಜು ತಿಪ್ಪಯ್ಯ ನಾಯ್ಕ ಇವರಿಗೆ ಚಿಕ್ಕನಕೋಡ ಅರಣ್ಯ ಸ.ನಂ.251 ರಲ್ಲಿ 0-10-0 ಗುಂಟೆ ಕ್ಷೇತ್ರಕ್ಕೆ ಮಾತ್ರ ಜಿಪಿಎಸ್ ಆಗಿರುತ್ತದೆಯೆಂದು ತಿಳಿಸಿ ಅದಕ್ಕೆ ಸಂಬಂಧಪಟ್ಟ ದಾಖಲೆ ಒದಗಿಸಿರುತ್ತಾರೆ. ಹಾಗೂ ಹೊಸದಾಗಿ ಅತಿಕ್ರಮಿಸಿದ 5-28-0 ಎಕರೆ ಜಾಗದ ಬಗ್ಗೆ ಅವರ ಬಳಿ ಯಾವುದೇ ದಾಖಲೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕ್ಷೇತ್ರದ ಕಳೆದ ಹತ್ತು ವರ್ಷದ ಸ್ಯಾಟ್‍ಲೈಟ್ (ಉಪಗ್ರಹ) ಆಧಾರಿತ ಛಾಯಾಚಿತ್ರಗಳನ್ನು ಪರಿಶೀಲಿಸಲಾಗಿ, ಕ್ಷೇತ್ರದ 0-28-0 ಪ್ರದೇಶದಲ್ಲಿ 2017 ರವರೆಗೂ ಅರಣ್ಯ ಜಾತಿಯ ದಟ್ಟ ಗಿಡಮರಗಳಿದ್ದು, 2017 ರ ನಂತರ ಅಡಿಕೆ, ತೆಂಗು ಸಸಿಗಳ ತೋಟವನ್ನು ನಿರ್ಮಿಸಿರುವುದು ಕಂಡು ಬಂದಿರುತ್ತದೆ. ಇನ್ನುಳಿದ 5-0-0 ಕ್ಷೇತ್ರದಲ್ಲಿ ಇಲ್ಲಿಯವರೆಗೂ ಯಾವುದೇ ಅಡಿಕೆ, ತೆಂಗು ಸಸಿಗಳ ತೋಟವನ್ನು ನಿರ್ಮಿಸಿರುವುದು ಕಂಡು ಬಂದಿರುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ 05-28-00 ಕ್ಷೇತ್ರಕ್ಕೆ ಸಂಬಂಧಿಸಿದ ಜಿಪಿಎಸ್ ನಕಾಶೆಯನ್ನು ಅಂದಿನ ಹಡಿನಬಾಳ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಇವರ ಸೀಲು ಮತ್ತು ಸಹಿಯನ್ನು ನಕಲು ಮಾಡಿ (ಪೋರ್ಜರಿ) ಅಕ್ರಮ ದಾಖಲೆ ಸೃಷ್ಠಿಸಿರುವುದು ತಿಳಿದು ಬಂದಿರುತ್ತದೆ. ಹಾಗೂ ಸದರಿ 5-28-00 ಪ್ರದೇಶವು 2015 ರ ನಂತರದ 3-0-0 ಪ್ರದೇಶಕ್ಕೂ ಹೆಚ್ಚಿನ ಹೊಸ ಒತ್ತುವರಿ ಮಾಡಿರುವುದು ದೃಢಪಟ್ಟಿರುತ್ತದೆ.
ಈ ಹಿಂದೆಯೂ ಸಹ ಇವರ ವಿರುದ್ಧ ಕೆಂಚಗಾರ ಗ್ರಾಮದ ಗ್ರಾಮಸ್ಥರು ದಿನಾಂಕ: 10.01.2023 ರಂದು ದೂರರ್ಜಿ ಸಲ್ಲಿಸಿದ್ದು ಇದರಲ್ಲಿ ಅರಣ್ಯ ಇಲಾಖೆಯು ನಿರ್ಮಿಸಿದ್ದ ಅಕೇಶಿಯಾ ನೆಡುತೋಪು ಪ್ರದೇಶದಲ್ಲಿ ಅಕ್ರಮವಾಗಿ ಅರಣ್ಯ ಅತಿಕ್ರಮಣ ಮಾಡಿ ಹೊಸದಾಗಿ ತೆಂಗು, ಅಡಿಕೆ ಸಸಿಗಳನ್ನು ನೆಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ದೂರರ್ಜಿಯನ್ನು ಪರಿಶೀಲಿಸಲಾಗಿ ಅದು ಕ್ಷೇತ್ರದಲ್ಲಿ ದೃಢಪಟ್ಟಿದ್ದು ಆರೋಪಿತರು ಮಾಡಿದ್ದ ಅತಿಕ್ರಮಣವನ್ನು ನಿಯಮಾನುಸಾರ ತೆರವುಗೊಳಿಸಲಾಗಿರುತ್ತದೆ.
ಇವರು ಪುನ: ದಟ್ಟಾರಣ್ಯದಲ್ಲಿ ಹೊಸದಾಗಿ ಇತ್ತೀಚೆಗೆ ಮಾಡಿದ ಅರಣ್ಯ ಅತಿಕ್ರಮಣದ ವಿರುದ್ಧ ದಿನಾಂಕ: 13.11.2024 ರಂದು ಕರ್ನಾಟಕ ಅರಣ್ಯ ಕಾಯಿದೆ 1963, ರ ಕಲಂ 24(ಜಿ), (ಜಿಜಿ) ಅಡಿಯಲ್ಲಿ ಹೊನ್ನಾವರ ಅರಣ್ಯ ವಲಯದಲ್ಲಿ ಗುನ್ನೆ ನಂಬರ 35/2024-25 ದಾಖಲಾಗಿರುತ್ತದೆ. ಮತ್ತು ದಿನಾಂಕ: 06.12.2024 ರಂದು ದಟ್ಟ ಕಾಡಿನಲ್ಲಿ ಕಾನೂನು ಬಾಹಿರವಾಗಿ ಹೊಸದಾಗಿ ಬೇಲಿ ಹಾಕಿದ 05-28-00 ಎಕರೆ ಕ್ಷೇತ್ರದ ಪೈಕಿ 0-28-0 ಗುಂಟೆ ಜಾಗದಲ್ಲಿದ್ದ 6-8 ವರ್ಷದ ಅಡಿಕೆ ಸಸಿಗಳನ್ನು ಬಿಟ್ಟು ಉಳಿದ 05-00-00 ಎಕರೆ ಜಾಗದಲ್ಲಿ ಹೊಸದಾಗಿ ಹಾಕಿರುವ ಅಡಿಕೆ ಹಾಗೂ ತೆಂಗಿನ ಸಸಿಗಳನ್ನು ಹಾಗೂ ಬೇಲಿಯನ್ನು ಪೊಲೀಸ್ ಸಿಬ್ಬಂದಿಗಳ ಸಮಕ್ಷಮ ನಿಯಮಾನುಸಾರ ತೆರವುಗೊಳಿಸಲಾಗಿರುತ್ತದೆ. ಹಾಗೂ ಆ ಸಂದರ್ಭದಲ್ಲಿ ರಾಜು ತಿಪ್ಪಯ್ಯ ನಾಯ್ಕ ಈತನಿಗೆ ನೋಟೀಸು ನೀಡಲಾಗಿ ನೋಟೀಸು ಪಡೆಯಲು ನಿರಾಕರಿಸಿದ್ದು ತನಿಖೆಗೆ ಯಾವುದೇ ರೀತಿಯಲ್ಲಿಯೂ ಸಹಕಾರ ನೀಡಿದ್ದು ಇರುವುದಿಲ್ಲ.
ಈ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು ಎಂಬ ಮುನ್ಸೂಚನೆಯಿಂದ ಆರೋಪಿತನನ್ನು ಮುಂದಿನ ವಿಚಾರಣೆಗೆ ವಲಯ ಕಛೇರಿ ಹೊನ್ನಾವರಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿರುತ್ತದೆ. ತದನಂತರ ಆರೋಪಿ ರಾಜು ತಿಪ್ಪಯ್ಯ ನಾಯ್ಕ ಈತನನ್ನು ಜಾಮೀನು ಮುಚ್ಚಳಿಕೆ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದು ಆದರೆ, ಈತನು ಈ ಅವಕಾಶಕ್ಕೆ ಒಪ್ಪದೆ ತಾನು ನ್ಯಾಯಾಲಯದಲ್ಲಿಯೇ ಜಾಮೀನು ಪಡೆಯುವುದಾಗಿ ತಿಳಿಸಿದ್ದರಿಂದ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಮಾನ್ಯ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇರುತ್ತದೆ.
ಈ ಮಧ್ಯೆ ದಿನಾಂಕ: 11.12.2024 ರಂದು ಅರಣ್ಯ ಹಕ್ಕು ಹೋರಾಟದ 100 ಕ್ಕೂ ಹೆಚ್ಚು ಜನರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಅರಣ್ಯಾಧಿಕಾರಿಗಳ ಮೇಲೆ ಇಲ್ಲಸಲ್ಲದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿ ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸಿ ಅರಣ್ಯ, ವನ್ಯಜೀವಿ ಸಂಪತ್ತನ್ನು ರಕ್ಷಿಸುತ್ತಿರುವ ನಿಷ್ಟಾವಂತ ಅರಣ್ಯ ಸಿಬ್ಬಂದಿಗಳ ಮನೋಸ್ಥೈರ್ಯ ಕುಗ್ಗಿಸುವಂತಹ ಕೆಲಸಗಳನ್ನು ಮಾಡುತ್ತಿರುವುದು ತುಂಬಾ ವಿಷಾದಕರ ಸಂಗತಿಯಾಗಿರುತ್ತದೆ. ಇಂತಹ ಧರಣಿ ಮಾಡುವ ಸಂದರ್ಭಗಳಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವುದು ಮತ್ತಷ್ಟು ಹೊಸ ಅಕ್ರಮ ಅರಣ್ಯ ಒತ್ತುವರಿಗಳನ್ನು ಉತ್ತೇಜಿಸುವುದಲ್ಲದೇ ಕರ್ತವ್ಯನಿರತ ಅರಣ್ಯ ಸಿಬ್ಬಂದಿಗಳ ಜೀವಕ್ಕೆ ಅತಿಕ್ರಮಣದಾರರಿಂದ ಅಪಾಯವಾಗುವ ಸಂಭವಗಳು ಹೆಚ್ಚಾಗಿರುತ್ತವೆ.
ಈ ವರ್ತನೆಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಕಾನೂನಿನಡಿಯಲ್ಲಿ ನಿಯಮಾನುಸಾರ ಕೆಲಸ ನಿರ್ವಹಿಸಿದ್ದು ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರುವುದಿಲ್ಲ ಎಂದು ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಪ್ರಕಟಣೆ ನೀಡಿದ್ದಾರೆ.