ಹೊನ್ನಾವರ : ತಾಲೂಕಿನಲ್ಲಿ ಬೇಕಾಬಿಟ್ಟಿ ಬೈಕ್ ಚಲಾವಣೆ ಮಾಡುತ್ತಿದ್ದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳಿಗೆ ಹೊನ್ನಾವರ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ SDM ಕಾಲೇಜ್ ಬಳಿ ಕಾಲೇಜ್ ವಿದ್ಯಾರ್ಥಿಗಳ ವಾಹನ ತಡೆದು ಪರಿಶೀಲಿಸಿ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ತಂದಿರುವ ಘಟನೆ ನಡೆದಿದೆ.
ರಸ್ತೆ ಸಂಚಾರದ ಅರಿವಿಲ್ಲದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಮನಸೋಯಿಚ್ಚೆ ಬೈಕ್ ಚಲಾವಣೆ ಮಾಡುತ್ತಿದ್ದಾರೆ. ಪಿಯು ವಯಸ್ಸಿನಲ್ಲಿ ಮೋಜಿಗೆ ನಮ್ಮ ಸಮಯವನ್ನು ನೀಡುತ್ತಿದ್ದಾರೆ. ವೇಗವಾಗಿ ಬೈಕ್ ಚಲಾಯಿಸುವುದು ಆ ಕ್ಷ ಣಕ್ಕೆ ಥ್ರಿಲ್ ಎನಿಸುತ್ತದೆ. ಆದರೆ, ಆ ಕ್ಷಣಿಕ ಥ್ರಿಲ್ನಿಂದಾಗಿ ಸಾಕಷ್ಟು ಜೀವಗಳು ಬಲಿಯಾಗುತ್ತಿವೆ. ವಿದ್ಯಾರ್ಥಿ ಜೀವನದಲ್ಲಿರುವ ವಿದ್ಯಾರ್ಥಿಗಳ ಬದುಕಿನ ಮೇಲೆ ಪೋಷಕರು ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಕಮರಿಹೋಗುವಂತೆ ಮಾಡಬಾರದು. ಪಾಲಕರು ಮಕ್ಕಳು ಕಾಲೇಜಿಗೆ ಹೋಗಿರುತ್ತಾರೆ ಎಂದು ಕೊಂಡರೆ, ಕೆಲವು ವಿದ್ಯಾರ್ಥಿಗಳು ಬೈಕ್ ಚಲಾಯಿಸಿ ಊರೆಲ್ಲ ಸುತ್ತುತ್ತಿರುತ್ತಾರೆ.
ಈ ಕುರಿತು ಎಚ್ಚತ್ತುಕೊಂಡ ಪೊಲೀಸರು ವಾಹನ ದಾಖಲಾತಿ ಹಾಗೂ ಮಕ್ಕಳ ವಯಸ್ಸು ಪರಿಶೀಲನೆ ಮಾಡಿ IMV ಕಾಯಿದೆ ಅಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪಾಲಕರನ್ನು ಠಾಣೆಗೆ ಕರೆದು ಸೂಕ್ತ ತಿಳುವಳಿಕೆ ನೀಡಲಾಗುವುದು ಮತ್ತು ಶಿಕ್ಷಣ ಸಂಸ್ಥೆ ಯವರಿಗೂ ಈ ಕುರಿತು ದ್ವಿಚಕ್ರ ವಾಹನ ಕಾಲೇಜ್ ತರುವ ಮಕ್ಕಳ ಮಾಹಿತಿ ನೀಡುವಂತೆ ತಿಳಿಸಲಾಗುವುದು ಎಂದು ಪಿ. ಎಸ್. ಐ ರಾಜಶೇಖರರವರು ಮಾಹಿತಿ ನೀಡಿದರು.