Slide
Slide
Slide
previous arrow
next arrow

ನ್ಯಾಯಾಲಯ ಆದೇಶಕ್ಕಿಲ್ಲದ ಕಿಮ್ಮತ್ತು: ರೈತರಿಗೆ ನ್ಯಾಯ ದೊರಕಿಸುವರೆಗೆ ಹೋರಾಟದ ನಿರ್ಣಯ

300x250 AD

ಸರಕಾರದ ನಿಲುವಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ತೀವ್ರ ಅಸಮಾಧಾನ

ಶಿರಸಿ: 2018ರ ಸಾಲಮನ್ನಾ ಯೋಜನೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡದ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ರೈತರ ಪರವಾಗಿ ಕಾನೂನು ಹೋರಾಟ ಮುಂದುವರೆಸಲು ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಉತ್ತರಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಟಿಆರ್‌ಸಿ ಸಭಾಭವನದಲ್ಲಿ ನಡೆದ ಒಕ್ಕೂಟ ವಾರ್ಷಿಕ ಸಭೆಯಲ್ಲಿ ನ್ಯಾಯಾಲಯದ ತೀರ್ಪನ್ನು ಮಾನ್ಯ ಮಾಡದ ಸರಕಾರದ ಕ್ರಮದ ವಿರುದ್ದ ಎಲ್ಲಾ ಸದಸ್ಯ ಸಹಕಾರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.

ಸಾಲಮನ್ನಾ ಯೋಜನೆಯ ಪ್ರಕರಣದ ಹಿನ್ನೆಲೆ:

ಕೃಷಿಕರ ಸಂಕಷ್ಟ ಪರಿಸ್ಥಿತಿಯನ್ನು ಅನುಲಕ್ಷಿಸಿ 2018ರಲ್ಲಿ ರಾಜ್ಯ ಸರಕಾರವು ಕೃಷಿಕರ ರೂ.1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಈ ಸಾಲ ಮನ್ನಾ ಜಾರಿಗೊಳ್ಳುವ ಹಂತದಲ್ಲಿ ಸರಕಾರ ಹಲವಾರು ನಿಬಂಧನೆಗಳನ್ನು ವಿಧಿಸಿ ಹಂತ ಹಂತವಾಗಿ ಕೃಷಿಕರನ್ನು ಗ್ರೀನ್ ಲೀಸ್ಟ್ ಗೆ ಒಳಪಡಿಸಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಸಾಲಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲಾಮಟ್ಟ ಹಾಗೂ ತಾಲೂಕಾ ಮಟ್ಟದಲ್ಲಿ ಅನುಷ್ಟಾನ ಸಮಿತಿಗಳನ್ನು ರಚಿಸಿ ಸಾಲಮನ್ನಾ ಅರ್ಹತಾ ಮಾನದಂಡಗಳಿಗೆ ಒಳಪಟ್ಟು ಬಿಡುಗಡೆಗೆ ಬಾಕಿ ಇರುವ ಕೃಷಿಕರ ಗ್ರೀನ್ ಲೀಸ್ಟ್ ಬಿಡುಗಡೆಗೊಳಿಸಲಾಗಿತ್ತು. ಅಂತಿಮವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ 1180 ಕೃಷಿಕರು ಸಾಲಮನ್ನಾಕ್ಕೆ ಅರ್ಹರೆಂದು ಗ್ರೀನ್ ಲೀಸ್ಟ್ ಪಟ್ಟಿಯಲ್ಲಿ ಪ್ರಕಟಗೊಂಡಿದ್ದರೂ ಸಹ ಸರಕಾರ ಹಣ ಬಿಡುಗಡೆ ಮಾಡದೇ ಇರುವುದರಿಂದ ಶಿರಸಿ, ಸಿದ್ದಾಪುರ, ಹಾಗೂ ಮುಂಡಗೋಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಉಚ್ಚನ್ಯಾಯಾಲಯದಲ್ಲಿ ಕೃಷಿಕರ ಪರವಾಗಿ ಏಪ್ರಿಲ್ 2023ರಲ್ಲಿ ರಿಟ್ ಅರ್ಜಿ ದಾಖಲಿಸಿದ್ದವು.
ಪ್ರಾಥಮಿಕ ಹಂತದಲ್ಲಿ ನ್ಯಾಯಾಲಯವು ಉತ್ತರಕನ್ನಡ ಜಿಲ್ಲೆಯಿಂದ ಲಂಬಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕತಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ರಿಟ್ ಅರ್ಜಿಗಳನ್ನು ಮಾನ್ಯ ಮಾಡಿತ್ತು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಗ್ರೀನ್ ಲೀಸ್ಟನಲ್ಲಿ ಬಂದಿರುವ ಈ ಸಂಘಗಳ ಸದಸ್ಯ ಕೃಷಿಕರಿಗೆ ಆದೇಶದ ಪ್ರತಿ ತಲುಪಿದ ನಾಲ್ಕು ವಾರದ ಒಳಗೆ ಸಾಲ ಮನ್ನಾ ಹಣ ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಿತ್ತು.
ಇದೇ ರೀತಿಯ ಆದೇಶವನ್ನು ಪುತ್ತೂರಿನ ನರಿಮೊಗರು ಪ್ರಾಥಮಿಕ ಪತ್ತಿನ ಸಂಘವೂ ಪಡೆದುಕೊಂಡಿತ್ತು. ಈ ಆದೇಶವಾಗಿ ಹಲವು ತಿಂಗಳು ಕಳೆದರೂ ಸಹ ನ್ಯಾಯಾಲಯದ ಆದೇಶಕ್ಕೆ ಕವಡೆ ಕಿಮ್ಮತ್ತು ಕೊಡದ ಸರಕಾರ ಮನ್ನಾ ಹಣವನ್ನು ಬಿಡುಗಡೆಗೊಳಿಸಿರಲಿಲ್ಲ.
ಈ ಕುರಿತು ಪ್ರಾಥಮಿಕ ಪತ್ತಿನ ಸಂಘದವರು ನ್ಯಾಯಾಲಯ ಆದೇಶ ನಿಂದನಾ ಅರ್ಜಿ ದಾಖಲಿಸಿ ಪುನ: ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಿಸಿ ದಿನಾಂಕ 1-12-2023ರಂದು ಸರಕಾರದ ಆರ್ಥಿಕ ಇಲಾಖೆ ಉಪಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೆಳೆ ಸಾಲ ಮನ್ನಾ ಯೋಜನೆ ವಿಷಯವು ಸರಕಾರದ ನೀತಿ ನಿಯಮಕ್ಕೆ ಸಂಬAಧಿಸಿದ್ದಾಗಿದ್ದು, ಸರಕಾರವು ಈ ಯೋಜನೆಯನ್ನು 2021ರಲ್ಲಿಯೇ ಮುಕ್ತಾಯಗೊಳಿಸಲು ಸೂಚಿಸಿದೆ, ಈ ಯೋಜನೆಯನ್ನು ಪುನ: ತೆರೆಯುವ ಪ್ರಮೇಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಾಥಮಿಕ ಪತ್ತಿನ ಸಂಘಗಳಿಗೆ ಹಿಂಬರಹ ನೀಡಿ ಸಹಕಾರ ಸಂಘಗಳ ನಿಬಂಧಕರ ಕಚೇರಿ ಬೆಂಗಳೂರು ಇವರ ಪತ್ರ ದಿನಾಂಕ 29-11-2024ರ ಮೂಲಕ ತಿಳಿಸಿತ್ತು.
ಸರಕಾರವು ಯೋಜನೆಯನ್ನು ಸ್ಥಗಿತಗೊಳಿಸುವ ಉದ್ದೇಶ ಹೊಂದಿದ್ದರೆ ಅರ್ಹ ರೈತರ ಗ್ರೀನ್ ಲೀಸ್ಟ್ ಪ್ರಕಟಿಸುವ ಔಚಿತ್ಯವೇನಿತ್ತು. ಅಲ್ಲದೇ 2018ರಲ್ಲಿ ಪ್ರಕಟಪಡಿಸಿದ ಸಾಲಮನ್ನಾ ಬಾಬ್ತು ಸಾಲ ಮನ್ನಾ ಅರ್ಹತೆಯ ನೈಜ ಕೃಷಿಕ ಸದಸ್ಯರೇ ಗ್ರೀನ್ ಲೀಸ್ಟ್ ನಲ್ಲಿ ಬಂದಿರುವವರಾಗಿದ್ದು ಅನೇಕ ಸಣ್ಣ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಕಾರಣ ಸರ್ಕಾರದ ಈ ನಿಲುವನ್ನು ಖಂಡಿಸಿ ಸೂಕ್ತ ಕಾನೂನು ಸಲಹೆ ಪಡೆದು ಇಂತಹ ಕೃಷಿಕರಿಗೆ ನ್ಯಾಯ ದೊರಕಿಸಲು ಒಕ್ಕೂಟದ ವತಿಯಿಂದ ಹೋರಾಟ ಮುಂದುವರೆಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಕೈಗೊಳ್ಳಲಾಯಿತು.
ಹಾಗೂ ಕೃಷಿಕ ಸದಸ್ಯರಿಗೆ ಬೆಳೆ ವಿಮಾ ಪರಿಹಾರ ದೊರಕುವಲ್ಲಿ ಉಂಟಾಗುತ್ತಿರುವ ಅನ್ಯಾಯ ಹಾಗೂ ಗೊಂದಲಗಳನ್ನು ನಿವಾರಿಸಲು ಸಂಬAಧಿಸಿದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

300x250 AD

ಒಕ್ಕೂಟದ ಕಾರ್ಯದರ್ಶಿಯಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಬಿ. ಹೆಗಡೆ ಮತ್ತೀಹಳ್ಳಿ ಮಾತನಾಡಿ, ಸಾಂಘಿಕ ಹೋರಾಟದ ಪರಿಣಾಮಗಳ ಬಗ್ಗೆ ತಿಳಿಸಿ ಒಕ್ಕೂಟದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಸದಸ್ಯ ಸಂಘಗಳ ಪ್ರತಿನಿಧಿಗಳಾದ ವಿ.ಪಿ ಹೆಗಡೆ ಕತಗಾಲ(ಉಪ್ಪಿನಪಟ್ಟಣ), ಜಿ.ವಿ.ಜೋಶಿ ಕಾಗೇರಿ, ಎನ್ ಎಸ್ ಹೆಗಡೆ ಕೋಟಿಕೊಪ್ಪ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಾದ ವಿ.ಎಂ ಹೆಗಡೆ ಬಿಸ್ಲಕೊಪ್ಪ, ಜಿ.ಆರ್ ಹೆಗಡೆ ಬೆಳ್ಳೇಕೇರಿ, ವೀರೇಂದ್ರ ಗೌಡರ್, ವಿನಯಕುಮಾರ ಗೌಡ,ಜಿ.ಎನ್ ಹೆಗಡೆ ಬಕ್ಕಳ, ಜಿಲ್ಲಾ ಯೂನಿಯನ್ ನಿರ್ದೇಶಕರಾದ ಮಹೇಂದ್ರ ಭಟ್ಟ ಬಿಸ್ಲಕೊಪ್ಪ, ಟಿಆರ್‌ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್ ಮಾವಿನಕೊಪ್ಪ ಹಾಗೂ ಪ್ರಾಥಮಿಕ ಪತ್ತಿನ ಸಂಘಗಳ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಿಆರ್‌ಸಿ ಸಿಬ್ಬಂದಿ ಸುಷ್ಮಾ, ಪ್ರಶಾಂತಿ, ಸ್ವಾತಿ ಪ್ರಾರ್ಥಿಸಿದರು. ಟಿಆರ್‌ಸಿಯ ಗಜಾನನ ಹೆಗಡೆ ಕುರುವಣಿಗೆ ನಿರ್ವಹಿಸಿ ವರದಿ ವಾಚನ ಮಾಡಿದರು.

ಪ್ರಸ್ತುತ ವರ್ಷ ಉಂಟಾಗಿರುವ ಅತಿವೃಷ್ಟಿ ಕಾರಣದಿಂದ ತಲೆದೋರಿದ ಕೊಳೆ ರೋಗ ಹಾಗೂ ವ್ಯಾಪಕವಾಗಿ ಹರಡುತ್ತಿರುವ ಎಲೆಚುಕ್ಕೆ ರೋಗದ ಪರಿಣಾಮವಾಗಿ ಕೃಷಿಕ ಸದಸ್ಯರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಈ ದಿಶೆಯಲ್ಲಿ ಸಹಕಾರ ಸಂಘಗಳ ಪಾತ್ರ ನಿರ್ಣಾಯಕವಾಗಿದ್ದು, ಈ ನಿಟ್ಟಿನಲ್ಲಿ ಕೃಷಿಕ ಸದಸ್ಯರ ಹಿತಕಾಯುವಲ್ಲಿ ಎಲ್ಲಾ ಸಹಕಾರ ಸಂಘಗಳು ಕಾರ್ಯನಿರ್ವಹಿಸಬೇಕಿದೆ.
-ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಅಧ್ಯಕ್ಷರು ಟಿಆರ್‌ಸಿ

Share This
300x250 AD
300x250 AD
300x250 AD
Back to top