ಸಿದ್ದಾಪುರ: ಸದಸ್ಯರ ಅಣತಿಯಂತೆ ಕೆಲಸ ಮಾಡಲು ಆಡಳಿತ ಮಂಡಳಿ ನೇಮಕವಾಗಿದೆಯೇ ಹೊರತು ಸ್ವೇಚ್ಛೆಯಿಂದ ನಡೆದುಕೊಳ್ಳಲು ಅಲ್ಲ. ರೈತರು ಗಟ್ಟಿಯಾಗಬೇಕು, ಸಂಸ್ಥೆ ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ನೂತನ ಆಡಳಿತ ಮಂಡಳಿಯ ಕೆಲಸ ಮಾಡುತ್ತಿದೆ ಎಂದು ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಹೇಳಿದರು.
ಪಟ್ಟಣ ಟಿಎಸ್ಎಸ್ ಸಭಾಭವನದಲ್ಲಿ ನಡೆದ ವಾರ್ಷಿಕ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.
ಟಿಎಸ್ಎಸ್ ಗೆ 102ನೇ ವರ್ಷಕ್ಕೆ ಕಾಲಿಟ್ಟಿದೆ. ಸದಸ್ಯರು ಪ್ರತಿ ಹಂತದಲ್ಲೂ ಆಡಳಿತ ಮಂಡಳಿಯ ಜೊತೆ ನಿಂತಿದ್ದೀರಿ. ಹಿಂದಿನ ಆಡಳಿತ ಮಂಡಳಿ ಸರಿಯಾದ ಆಡಿಟ್ ನಡೆಸದೆ ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟವನ್ನು ಉಂಟುಮಾಡಿದ್ದಾರೆ. ಅದರ ಪರಿಣಾಮ ಇಂದು ಸಂಸ್ಥೆ 123 ಕೋಟಿ ನಷ್ಟದಲ್ಲಿದೆ. ಇಂತಹ ಸಂದರ್ಭಗಳಲ್ಲಿ ಸಂಸ್ಥೆಯ ನೂರು ವರ್ಷದ ಸಂಭಮವನ್ನು ಹೇಗೆ ಆಚರಿಸಬೇಕೆಂಬುದೇ ತಿಳಿಯುತ್ತಿಲ್ಲ ಎಂದರು.
ಉಪಾಧ್ಯಕ್ಷ ಎಂ.ಎನ್.ಭಟ್ ತೋಟಿಮನೆ ಮಾತನಾಡಿ, ಸಹಕಾರಿ ಕ್ಷೇತ್ರ ಗಟ್ಟಿಯಾದಷ್ಟು ರೈತರಿಗೆ ಅನುಕೂಲವಾಗುತ್ತದೆ. ಪ್ರಾಮಾಣಿಕತೆ ಪತ್ತಿನ ಮೂಲ ಎಂಬ ಮಾತಿನಂತೆ ಸಹಕಾರಿ ಕ್ಷೇತ್ರದ ಮೇಲೆ ವಿಶ್ವಾಸವಿಟ್ಟು ಹಿಂದಿನವರು ಸಹಕಾರಿ ಕ್ಷೇತ್ರವನ್ನು ಬೆಳೆಸಿದ್ದಾರೆ. ಆಡಳಿತ ಮಂಡಳಿ, ಸಿಬ್ಬಂದಿಗಳು ಮತ್ತು ಸದಸ್ಯರು ಪ್ರಾಮಾಣಿಕವಾಗಿದ್ದರೆ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದರು.
ಶಾಖಾ ವ್ಯಪಸ್ಥಾಪಕ ರಾಜೀವ ಹೆಗಡೆ ವರದಿ ವಾಚಿಸಿದರು. ಸಭೆಯಲ್ಲಿ ಅಡಿಕೆ ಖರೀದಿದಾರರು, ಹಿರಿಯ ಸದಸ್ಯರು ಹಾಗೂ ಹಮಾಲರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ರವೀಂದ್ರ ಹೆಗಡೆ ಹಿರೇಕೈ, ಅಶೋಕ ಹೆಗಡೆ, ವಸುಮತಿ ಭಟ್, ಮುಖ್ಯ ವ್ಯವಸ್ಥಾಪಕ ಗಿರೀಶ ಹೆಗಡೆ, ಶಾಖಾ ವ್ಯವಸ್ಥಾಪಕ ರಾಜೀವ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಅಶೋಕ ಹೆಗಡೆ ವಂದಿಸಿದರು. ಪರಮೇಶ್ವರ ಹೆಗಡೆ ನಿರೂಪಿಸಿದರು.