ಸಿದ್ದಾಪುರ: ಕನ್ನಡದ ಕುರಿತಾದ ನಮ್ಮ ಅಭಿಮಾನ ಇನ್ನೂ ಇಮ್ಮಡಿಗೊಳ್ಳಬೇಕು. ಭುವನೇಶ್ವರಿ ದೇವಿಯ ಸನ್ನಿಧಿ ಭುವನಗಿರಿ ಮತ್ತು ಕದಂಬರ ರಾಜಧಾನಿ ಬನವಾಸಿ ಇವೆರಡೂ ಕನ್ನಡಿಗರ ಪಾಲಿಗೆ ಪವಿತ್ರ ಕ್ಷೇತ್ರಗಳು ಎಂದು ಮಡಿಕೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಧೀಶೆ ಸಿ. ರೇಣುಕಾಂಬಾ ಹೇಳಿದರು.
ತಾಲ್ಲೂಕಿನ ಭುವನಾಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕದಂಬ ಸೈನ್ಯದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿ ನಮ್ಮ ಕನ್ನಡಕ್ಕೆ ಪುರಾತನವಾದ ಇತಿಹಾಸವಿದೆ. ಆದರೆ ಇಂದು ಯುವ ಪೀಳಿಗೆಗೆ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ. ನಾವು ಹೆಚ್ಚು ಕನ್ನಡವನ್ನು ಬಳಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛ ಕನ್ನಡವನ್ನು ನೀಡಲು ಸಾಧ್ಯ. ವೈಯುಕ್ತಿಕವಾಗಿ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಾ ಇಂದಿಗೂ ನ್ಯಾಯಲಯದಲ್ಲಿ ಕನ್ನಡದಲ್ಲೇ ಆದೇಶ ನೀಡುತ್ತಿದ್ದೇನೆ ಎಂದರು.
ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡದ ಪರಂಪರೆಯಲ್ಲಿ ಮೊದಲಸ್ಥಾನದಲ್ಲಿರುವ ಭುವನಗಿರಿ ಕನ್ನಡಿಗರ ಹೆಮ್ಮೆಯ ಮತ್ತು ಪೂಜ್ಯ ಕ್ಷೇತ್ರ. ಕದಂಬ ಸೈನ್ಯ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತ ಬಂದಿದ್ದು ದೇವಾಲಯ ಆಡಳಿತ ಮಂಡಳಿ, ಸಾರ್ವಜನಿಕರು, ಪತ್ರಕರ್ತರು ಸಹಕಾರ ನೀಡುತ್ತಿದ್ದಾರೆ ಎಂದರು.
ಅತಿಥಿಗಳಾಗಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ್, ನರಗುಂದದ ವಕೀಲ ರಮೇಶ ನಾಯ್ಕರ್, ಬಾದಾಮಿ ರೈತ ಸೇನಾ ತಾಲ್ಲೂಕು ಅಧ್ಯಕ್ಷ ಅಶೋಕ ಸಾತನ್ನವರ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು, ಬರೆಹಗಾರ್ತಿ ಸುಧಾರಾಣಿ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಮಾಲತಿ ಭಟ್ ಅವರಿಗೆ ವೀರರಾಣಿ ಚೆನ್ನಭೈರವಾದೇವಿ ಪ್ರಶಸ್ತಿ, ಯಕ್ಷಗಾನ ಕಲಾವಿದ ವಸಂತ ಹೆಗಡೆ, ಪ್ರಾಚಾರ್ಯ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಪ್ರೊ|ಎಂ.ಕೆ. ನಾಯ್ಕ ಹೊಸಳ್ಳಿ, ಜಾನಪದ ಗಾಯಕ ಗೋಪಾಲ ಕಾನಳ್ಳಿ, ರಂಗಭೂಮಿ ನಟ,ನಿರ್ದೇಶಕ ಗಣಪತಿ ಹೆಗಡೆ ಹಿತ್ಲಕೈ, ವಿದ್ವಾಂಸ ಜಯರಾಮ ಭಟ್ ಗುಂಜಗೋಡ ಅವರುಗಳಿಗೆ ಕದಂಬ ರತ್ನ ಪ್ರಶಸ್ತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ಹಲವು ಸಾಧಕರಿಗೆ ಕಾಕುತ್ಸವರ್ಮ ಪ್ರಶಸ್ತಿ, ವೀರರಾಣಿ ಚೆನ್ನಭೈರವಾದೇವಿ ಪ್ರಶಸ್ತಿ ಮತ್ತು ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ಉದಯ ಕುಮಾರ ಕಾನಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿಂಗಪ್ಪ ಅರೇರ ಸವಣೂರು ನಿರೂಪಿಸಿದರು.