ಭಟ್ಕಳ, ಮಂಗಳೂರು ಚಂಡೆ ತಂಡದ ಸದಸ್ಯರಿಂದ ಶ್ಲಾಘನೀಯ ಕಾರ್ಯ
ಭಟ್ಕಳ: ಮಾರುತಿ ಚಂಡೆ ತಂಡ ಭಟ್ಕಳ ಹಾಗೂ ಶಬರಿ ಚಂಡೆ ತಂಡ ಮಂಗಳೂರು ವತಿಯಿಂದ ಮಣ್ಕುಳಿ ಹಿಂದೂ ರುದ್ರಭೂಮಿಯನ್ನು ತಂಡದ ಸದಸ್ಯರೆಲ್ಲ ಸೇರಿ ಶನಿವಾರದಂದು ಸ್ವಚ್ಛತೆ ಮಾಡುವುದರ ಮೂಲಕ ಶ್ರಮದಾನ ಮಾಡಿದರು.
ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹೆಸರಿನಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಾರ್ವಜನಿಕರ ಸಹಕಾರ ಇಲ್ಲದೆ ವಿಫಲವಾಗಿವೆ. ಆದರೆ ಸ್ವಯಂ ಪ್ರೇರಣೆಯಿಂದ ಮಾರುತಿ ಚಂಡೆ ತಂಡ ಭಟ್ಕಳ ಹಾಗೂ ಶಬರಿ ಚಂಡೆ ತಂಡ ಮಂಗಳೂರು ಕೈಗೊಂಡ ಈ ಕಾರ್ಯ ಇತರರಿಗೆ ಮಾದರಿಯಾಗಬೇಕೆಂಬ ಉದ್ದೇಶದಿಂದ ಇಲ್ಲಿನ ಬೆಳಲಖಂಡ ರಸ್ತೆಯಲ್ಲಿರುವ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛತೆ ಮಾಡಿದ್ದಾರೆ.
ಶನಿವಾರ ಮಾರುತಿ ಚಂಡೆ ತಂಡ ಭಟ್ಕಳ ಹಾಗೂ ಶಬರಿ ಚಂಡೆ ತಂಡ ಮಂಗಳೂರಿನ ಸದಸ್ಯರು 2 ಜೆಸಿಬಿ ಸಹಾಯದಿಂದ ಸ್ಮಶಾನಕ್ಕಿಳಿದು ಶವ ಸಂಸ್ಕಾರದ ಸಂಧರ್ಭದಲ್ಲಿ ಶವದ ಮೇಲಿದ್ದ ಹೂವು ಇನ್ನಿತರ ವಸ್ತುಗಳನ್ನು ಒಂದೇ ಕಡೆ ಹಾಕದೆ ಅಲ್ಲಲ್ಲಿ ಎಸೆದು ಹೋಗಿದ್ದ ವಸ್ತುಗಳನ್ನು ಹಾಗೂ ರುದ್ರ ಭೂಮಿಯ ಸುತ್ತ ಮುತ್ತಲು ಬೆಳೆದ ಆಳೆತ್ತರದ ಗಿಡಗಂಟಿಗಳನ್ನು ಕತ್ತರಿಸಿ ಒಂದೆಡೆ ಸೇರಿಸಿ ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾರುತಿ ಚಂಡೆ ತಂಡ ಭಟ್ಕಳ ಇದರ ಮುಖ್ಯಸ್ಥರಾದ ಗಣೇಶ ದೇವಾಡಿಗ, ಸದಸ್ಯರಾದ ಸುಬ್ರಹ್ಮಣ್ಯ ದೇವಾಡಿಗ,ವಿನಾಯಕ ಆಚಾರಿ. ಜಗದೀಶ ಗೊಂಡ ಮಾರುಕೇರಿ, ವೆಂಕಟರಮಣ ದೇವಾಡಿಗ ಹಾಗೂ ಶಬರಿ ಚಂಡೆ ತಂಡ ಮಂಗಳೂರಿನ ಸುನೀಲ,ಆದಿತ್ಯ ,ರವಿ, ಶ್ರೇಯಸ್ ಹಾಗೂ ಮುಂತಾದವರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು