ಯಲ್ಲಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025- 26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ಹಾಗೂ 2024-25ನೇ ಸಾಲಿನಲ್ಲಿ ನರೇಗಾದಡಿ ನೀಡಲಾದ ನಿಗದಿತ ಮಾನವ ದಿನಗಳ ಸೃಜನ ಸಾಧಿಸಲು ಪೂರಕವಾಗಿ ಐಇಸಿ ಚಟುವಟಿಕೆಗಳಡಿ ತಾಲ್ಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುಕ್ರವಾರ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ, ರೋಜಗಾರ ದಿವಸ ಆಚರಣೆ, ಮನೆ-ಮನೆ ಭೇಟಿ ಕಾರ್ಯ ಕೈಗೊಂಡು ಜನರಿಗೆ ಜಾಗೃತಿ ಮೂಡಿಸಿ ನರೇಗಾದಡಿ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ. ಗೌಡ ಮಾತನಾಡಿ, ಹಳ್ಳಿಗಳ ಜನರ ಆಶೋತ್ತರಗಳನ್ನು ನಿವಾರಣೆ, ವಲಸೆ ತಡೆ, ಸ್ವಂತ ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ತುಂಬಾ ಸಹಕಾರಿಯಾಗಿದೆ. ತಡೆಗೋಡೆ, ಕೆರೆ, ಕಾಲುವೆ, ರಸ್ತೆ, ಸ್ಮಶಾನ, ಶಾಲಾ ಸಮಗ್ರ ಅಭಿವೃದ್ಧಿಯಂತಹ ಸಮುದಾಯ ಕಾಮಗಾರಿಗಳಲ್ಲಿ ಗ್ರಾಮದ ಉದ್ಯೋಗ ಚೀಟಿ ಹೊಂದಿದ ಅರ್ಹ ಪ್ರತಿ ಕುಟುಂಬಕ್ಕೆ ಪ್ರತಿದಿನಕ್ಕೆ 349 ರೂಪಾಯಿ ಕೂಲಿ ಮೊತ್ತದಂತೆ ವರ್ಷðದಲ್ಲಿ 100 ಜನರಿಗೆ ಕೂಲಿ ಕೆಲಸ ನೀಡಲಾಗುತ್ತಿದೆ. ಜೊತೆಗೆ ಜೀವನಮಟ್ಟ ಸುಧಾರಣೆಗೆ ಪೂರಕವಾಗಿರುವ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಹೀಗಾಗಿ ಜನರು ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಈ ಎಲ್ಲ ಸೌಕರ್ಯವನ್ನ ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತ್ನ ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ ಅವರು ಮಾತನಾಡಿ, ಜನಸಾಮಾನ್ಯರ ಆರ್ಥಿಕ ಮಟ್ಟ ಹೆಚ್ಚಿಸಿ ಸ್ವಾವಲಂಬಿ ಜೀವನ ನಡೆಸಲು ನರೇಗಾದಡಿ 260ಕ್ಕೂ ಅಧಿಕ ಕಾಮಗಾರಿಗಳು ಲಭ್ಯ ಇವೆ. ಅದರಲ್ಲೂ ಪ್ರಮುಖವಾಗಿ 1.50 ಲಕ್ಷದವರೆಗೆ ಕೃಷಿ ಬಾವಿ, 11 ಸಾವಿರದಡಿ ಬಚ್ಚಲುಗುಂಡಿ, 60 ಸಾವಿರದಡಿ ಕೋಳಿ ಶೆಡ್, 57 ಸಾವಿರದಲ್ಲಿ ದನದ ಕೊಟ್ಟಿಗೆ, ಹಂದಿ ಶೆಡ್, 20 ಸಾವಿರದಲ್ಲಿ ಎರೆಹುಳು ತೊಟ್ಟಿ, 70 ಸಾವಿರದಲ್ಲಿ ಕುರಿ/ಮೇಕೆ ಶೆಡ್, 45 ಸಾವಿರದಲ್ಲಿ ಕೊಳವೆ ಬಾವಿ ಜಲ ಮರುಪೂರಣ ಘಟಕ, 4500ರಲ್ಲಿ ಪೌಷ್ಟಿಕ ಕೈ ತೋಟದಂತಹ ಕಾಮಗಾರಿ ಮಾಡಿಕೊಳ್ಳಬಹುದು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಸದಸ್ಯ ಸಾವಿತ್ರಿ ನಾಗನೂರು, ತಾಪಂ ತಾಂತ್ರಿಕ ಸಹಾಯಕ ಅಭಿಯಂತರ ಪ್ರಕಾಶ ಹೆಗಡೆ, ಪಿಡಿಒ ನಾರಾಯಣ ಬಿ ಗೌಡ, ಗ್ರೇಡ್-2 ಕಾರ್ಯದರ್ಶಿ ಎಸ್.ಜಿ. ಬಾಪುನವರ, ಕ್ಲರ್ಕ್ ಕಂ ಡಿಇಒ ಪ್ರದೀಪ ಮರಾಠಿ, ಸಿಬ್ಬಂದಿ ಗಜಾನನ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.