ಜೆಸಿಬಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದ ಶಾಸಕ ಆರ್ವಿಡಿ
ಹಳಿಯಾಳ : ನಾಡಿನ ಬುಡಕಟ್ಟು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಮತ್ತು ಹೈನುಗಾರಿಕೆಯನ್ನೆ ಮೂಲ ಕಸುಬನ್ನಾಗಿಸಿಕೊಂಡಿರುವ ಗೌಳಿ ಸಮುದಾಯದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಅತ್ಯಂತ ಸಂತಸದ ವಿಚಾರ. ಗೋವುಗಳ ಆರಾಧಕರಾಗಿರುವ ಗೌಳಿ ಸಮುದಾಯದವರು ಸಜ್ಜನರು ಮತ್ತು ಸುಸಂಸ್ಕೃತರು ಆಗಿದ್ದಾರೆ ಎಂದು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಹಳಿಯಾಳ ತಾಲೂಕಿನ ಭಾಗವತಿಯಲ್ಲಿ ಗೌಳಿ ಸಮುದಾಯದ ಯುವಕ ಠಕ್ಕು ಬಜಾರಿ ಗೌಳಿ ಅವರು ನೂತನವಾಗಿ ಖರೀದಿಸಿದ ಜೆಸಿಬಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಿ ಮಾತನಾಡಿದರು. ನಮ್ಮಲ್ಲಿ ಛಲ ಹಾಗೂ ಅದಕ್ಕೆ ತಕ್ಕುದಾಗಿ ಪ್ರಯತ್ನವಿದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಬಡತನವನ್ನು ಮೆಟ್ಟಿನಿಂತು ಅಸಾಧ್ಯವನ್ನು ಸಾಧ್ಯವಾಗಿಸಿಕೊಂಡ ಠಕ್ಕು ಬಜಾರಿ ಗೌಳಿಯವರ ಈ ಸಾಧನೆ ಇಡೀ ಗೌಳಿ ಸಮುದಾಯಕ್ಕೆ ಪ್ರೇರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಠಕ್ಕು ಬಜಾರಿ ಗೌಳಿ ಅವರು ನಾನು ಗ್ರಾಮ ಪಂಚಾಯಿತಿಯ ಅಧ್ಯಕ್ಷನಾಗಲು ಆರ್.ವಿ. ದೇಶಪಾಂಡೆ ಆಶೀರ್ವಾದವೇ ಮೂಲ ಕಾರಣ. ಆರ್.ವಿ.ದೇಶಪಾಂಡೆ ನಮ್ಮನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ ಫಲವಾಗಿ ಇಂದು ನಾನು ಬ್ಯಾಂಕ್ ಸಾಲದ ನೆರವಿನೊಂದಿಗೆ ರೂ.38 ಲಕ್ಷ ಮೊತ್ತದ ಜೆಸಿಬಿಯನ್ನು ಖರೀದಿಸುವಂತಾಗಿದೆ. ನಮ್ಮಂತ ಬಡ ಗೌಳಿ ಸಮುದಾಯದವರ ಮನೆಗೆ ಬಂದು ನಮ್ಮ ಆತಿಥ್ಯವನ್ನು ಸ್ವೀಕರಿಸಿ, ನಮ್ಮನ್ನು ಹರಸಿ ಆಶೀರ್ವದಿಸಿದ ಆರ್.ವಿ.ದೇಶಪಾಂಡೆಯವರ ಸರಳತೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ. ಗೌಳಿ ಸಮುದಾಯವನ್ನು ಅತಿ ಹೆಚ್ಚು ಗೌರವಿಸುವ ಮತ್ತು ಪ್ರೀತಿಸುವ ಶ್ರೇಷ್ಠ ರಾಜಕಾರಣಿ ಇದ್ದರೆ ಅದು ಆರ್.ವಿ.ದೇಶಪಾಂಡೆಯವರು ಎನ್ನುವುದನ್ನು ಅಭಿಮಾನದಿಂದ ಹೇಳುತ್ತೇನೆ ಎಂದರು.
ಠಕ್ಕು ಬಜಾರಿ ಗೌಳಿ ಹಾಗೂ ಅವರ ಕುಟುಂಬಸ್ಥರಲ್ಲಿ ಗೌಳಿಬಾಷೆಯಲ್ಲಿಯೇ ಆರ್.ವಿ.ದೇಶಪಾಂಡೆಯವರು ಕೆಲ ಹೊತ್ತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಗೌಳಿ ಸಮುದಾಯದವರು ಉಪಸ್ಥಿತರಿದ್ದರು.