ಶಿರಸಿಯಲ್ಲಿ ನಾಲ್ಕು ದಿನಗಳ ಕಾವಿಕಲೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಶಿರಸಿ: ಅದ್ಭುತ ಕಲೆಯಾದ ಬೇಡರ ವೇಷವು ಅಕಾಡೆಮಿಯ ವ್ಯಾಪ್ತಿಯಲ್ಲಿ ಬರದಿದ್ದರೂ, ಅದೂ ಒಂದು ಉತ್ತಮ ಕಲೆಯಾಗಿರುವುದರಿಂದ ಅದನ್ನು ಉಳಿಸಿ, ಬೆಳೆಸುವ ಸಲುವಾಗಿ ಸಹಕಾರ ನೀಡಲಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ ಭರವಸೆ ನೀಡಿದರು.
ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ಲಲಿತಾ ಅಕಾಡೆಮಿಯಿಂದ ಆಯೋಜಿಸಲಾದ ನಾಲ್ಕು ದಿನಗಳ ಕಾವಿಕಲೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಸಿದ್ಧ ಬೇಡರವೇಷ ಕಲೆ ಶಿರಸಿಯಲ್ಲಿ ಪ್ರದರ್ಶನಗೊಳ್ಳುತ್ತಿರುವುದರ ಜೊತೆ ಹೊರಗಡೆ ಭಾಗದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಲಿದೆ ಎಂದರು.
ಕಾವಿಕಲೆ ಎಂಬುದು ಹಿಂದಿನ ಕಾಲದಲ್ಲಿ ಅತ್ಯದ್ಭುತ ಕಲೆಯಾಗಿದ್ದು, ಶಿರಸಿಯಲ್ಲೂ ಬಹಳವಾಗಿ ಪ್ರಚಲಿತದಲ್ಲಿತ್ತು. ಆದರೆ ಈಗ ನಶಿಸಿ ಹೋಗುತ್ತಿರುವ ಕಾರಣದಿಂದಾಗಿ ಯುವಪೀಳಿಗೆಗೆ ಇದರ ಅರಿವು ಮೂಡಿಸುವುದಕ್ಕೆ ಕಾರ್ಯಾಗಾರ ಆಯೋಜನೆಗೊಂಡಿದೆ. ಅಕಾಡೆಮಿಯಿಂದ ಜಿಲ್ಲೆಯಲ್ಲಿನ ಕಲಾವಿದರನ್ನು ಗುರುತಿಸುವಂತಹ ಕೆಲಸ ನಡೆಯಲಿದೆ ಎಂದರು.
ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಕಾವಿಕಲೆಯ ಚಿತ್ತಾರ ಶಿರಸಿ ಭಾಗದಲ್ಲಿ ಇಂದಿಗೂ ಕಾಣಬಹುದಾಗಿದೆ. ದೇಶದ ಇತಿಹಾಸ, ಸಂಸ್ಕೃತಿಯನ್ನು ಕಲೆಗಳನ್ನು ಆಧರಿಸಿಯೇ ಗುರುತಿಸುತ್ತೇವೆ. ಇಂತಹ ಕಲೆಗಳ ಪುನರುತ್ಥಾನ ಮಾಡಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ವಾಲುತ್ತಿರುವ ಯುವ ಸಮೂಹಕ್ಕೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವುದಕ್ಕೆ ಇಂತಹ ಕಲೆಗಳ ಉಳಿವು ಅಗತ್ಯ ಎಂದರು.
ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗ್ವತ ಮಾತನಾಡಿ, ಲಲಿತಕಲಾ ಅಕಾಡೆಮಿಯಿಂದ ಕೊಡಮಾಡುವ ಪ್ರಶಸ್ತಿಗಳಿಗೆ ಜಿಲ್ಲೆಯ ಕಲಾವಿದರನ್ನು ಪರಿಗಣಿಸಬೇಕಾಗಿದೆ. ಈ ಭಾಗದ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಅಕಾಡೆಮಿಗಳಿಂದಾಗಬೇಕು ಎಂದರು.
ಕಲಾವಿದ ರವಿ ಗುನಗಾ ಮಾತನಾಡಿ, ಕಾವಿಕಲೆಯನ್ನು ಮಣ್ಣಿನ ಗೋಡೆಗಳಲ್ಲಿ ಇದನ್ನು ಚಿತ್ರಿಸಲಾಗುತ್ತಿತ್ತು. ನಂತರ ಸಿಮೆಂಟ್ ಗೋಡೆಗಳು ಬಂದ ಮೇಲೆ ಅವು ನಶಿಸುತ್ತಿವೆ ಎಂದರು.
ಕಾಲೇಜು ಪ್ರಾಚಾರ್ಯ ಪ್ರೊ.ಜಿ.ಟಿ.ಭಟ್ಟ ಮಾತನಾಡಿ, ಕಾವಿಕಲೆ ಇದು ಕರಾವಳಿ ಭಾಗದಲ್ಲಿ ಜಾಸ್ತಿ ಕಂಡುಬರುತ್ತದೆ. ಬುಡಕಟ್ಟು ಅಲೆಮಾರಿ ಜನಾಂಗದವರ ಮುಖ್ಯ ಕಲೆ ಇದಾಗಿದೆ. ಶೇಡಿ ಮಣ್ಣು, ಕೆಮ್ಮಣ್ಣಿನಿಂದ ಬಿಡಿಸುತ್ತಿದ್ದರು. ಈ ಕಲೆಯನ್ನು ಮನೆಗೆ ಚಿತ್ರಿಸುವುದರಿಂದ ಯಾವುದೇ ಆತಂಕ ಎದುರಾಗಬಾರದು ಎಂಬುದು ಅದರ ಹಿಂದಿನ ಉದ್ದೇಶವಿತ್ತು ಎಂದರು.
ಲಲಿಕಲಾ ಅಕಾಡೆಮಿಯ ಸದಸ್ಯ ಸಂಚಾಲಕಿ ಶಾಂತಾ ಪ್ರವೀಣ ಕೊಲ್ಲೆ ಸ್ವಾಗತಿಸಿದರು. ಉಪನ್ಯಾಸಕಿ ವಿಜಯಾ ಭಟ್ಟ ನಿರೂಪಿಸಿದರು ಸಿಬ್ಬಂದಿ ವೆಂಕಟೇಶ ವಂದಿಸಿದರು. ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಯಿಂದ ೧೪ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.