Slide
Slide
Slide
previous arrow
next arrow

ರಂಗಪ್ರವೇಶಕ್ಕೆ ಸಜ್ಜಾದ ‘ಸ್ನೇಹಶ್ರೀ’

300x250 AD

ನಾಟ್ಯ ಬದುಕಿನ ಪ್ರಮುಖ ಘಟ್ಟಕ್ಕೆ ಸಾಕ್ಷಿಯಾಗಲಿದೆ ‘ರಂಗಧಾಮ’

ಶಿರಸಿ: ಮೈತ್ರೇಯಿ‌ ಕಲಾ ಟ್ರಸ್ಟ್ ಸಹಯೋಗದಲ್ಲಿ ಅ.21, ಸೋಮವಾರ ಸಂಜೆ 5.30ರಿಂದ ನಗರದ ರಂಗಧಾಮ ವೇದಿಕೆಯಲ್ಲಿ ಕು.ಸ್ನೇಹಶ್ರೀ ಹೆಗಡೆ ಇವಳ ‘ಭರತನಾಟ್ಯ ರಂಗಪ್ರವೇಶ’ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟರಾಜ ನೃತ್ಯಶಾಲೆಯ ವಿದುಷಿ ಸೀಮಾ ಭಾಗ್ವತ್, ಸಾಗರದ ಶ್ರೀ ಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ವಿದುಷಿ ವಸುಧಾ ಶರ್ಮಾ, ಚಿತ್ರದುರ್ಗದ ಲಾಸಿಕಾ ಫೌಂಡೇಶನ್‌ನ ವಿದುಷಿ ಶ್ವೇತಾ ಭಟ್ ಆಗಮಿಸಲಿದ್ದಾರೆ.

ಕುಮಾರಿ‌ ಸ್ನೇಹಶ್ರೀ ಹೆಗಡೆ ಶಿರಸಿ ತಾಲೂಕಿನ ಸಾಲ್ಕಣಿ ಸಮೀಪದ ಹಕ್ರೆಮನೆಯ ದತ್ತಾತ್ರೇಯ ಹಾಗೂ ಬಿಂದು ಹೆಗಡೆ ದಂಪತಿಗಳ ಸುಪುತ್ರಿಯಾದ ಕುಮಾರಿ ಸ್ನೇಹಶ್ರೀ ಹೆಗಡೆ ಶಿರಸಿಯಲ್ಲಿಯೇ ಪಿ.ಯು.ಸಿ ಮುಗಿಸಿ ಈಗ ಮೈಸೂರಿನಲ್ಲಿ ಬಿ.ಎ. ಪದವಿಯನ್ನು ಓದುತ್ತಿದ್ದಾಳೆ.

ಬಾಲ್ಯದಿಂದಲೇ ಕಲೆಯಲ್ಲಿ ತುಂಬಾ ಅಸಕ್ತಿಯುಳ್ಳ ಅವಳು ತನ್ನ ಆರನೇ ವಯಸ್ಸಿನಲ್ಲಿಯೇ ವಿದುಷಿ ಮಹಿಮಾ ಶೇಖರ್ ಬೆಂಗಳೂರು ಅವರಲ್ಲಿ ಭರತನಾಟ್ಯ ಜೂನಿಯರ್ ಅಭ್ಯಾಸ ಪ್ರಾರಂಭಿಸಿ, ಸೀನಿಯರ್ ಅಭ್ಯಾಸವನ್ನು ವಿದುಷಿ ಸಂಪದಾ ಮರಾಠಿ ಅವರಲ್ಲಿ ಪೂರೈಸಿ, ವಿದ್ವತ್‌ನ್ನು ವಿದುಷಿ ಸೌಮ್ಯ ಪ್ರದೀಪ ಹೆಗಡೆ ಅವರಲ್ಲಿ ಅಭ್ಯಸಿಸುತ್ತಿದ್ದಾಳೆ. ಅಲ್ಲದೆ ವಿದ್ವತ್‌ಪೂರ್ವ ಪರೀಕ್ಷೆಯನ್ನೂ ಪೂರೈಸಿರುತ್ತಾಳೆ.

ಬಹುಮುಖ ಪ್ರತಿಭೆಯುಳ್ಳ ಅವಳು ಯಕ್ಷಗಾನವನ್ನು ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ಇವರಲ್ಲಿ ಅಭ್ಯಾಸ ಮಾಡುತ್ತಿದ್ದು ಅವರ ನೇತೃತ್ವದಲ್ಲಿ ಹಲವಾರು ಪ್ರದರ್ಶನಗಳನ್ನೂ ನೀಡಿರುತ್ತಾಳೆ. ಇದಲ್ಲದೆ ತಾಳಮದ್ದಲೆ, ಯೋಗ, ನಾಟಕ,ಏಕಪಾತ್ರ ಅಭಿನಯ, ವಿಶೇಷ ರೀತಿಯ ರಿಂಗ್ ಡಾನ್ಸ್, ಕರಕುಶಲತೆ ಹೀಗೆ ಹಲವು ಪ್ರತಿಭೆಗಳನ್ನು ಮೈಗೂಡಿಸಿಕೊಂಡಿದ್ದಲ್ಲದೆ ರಾಜ್ಯದಾದ್ಯಂತ 200 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನಳಾಗಿರುತ್ತಾಳೆ. ಅವುಗಳೆಲ್ಲದರೆ ಜೊತೆಗೆ ಶಾಲೆಯ ಪಾಠ ಕಲಿಕೆಯಲ್ಲಿ ಪ್ರತಿಶತ 96 ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತಾಳೆ.

ಗುರುಗಳು: ವಿದುಷಿ ಸೌಮ್ಯ ಪ್ರದೀಪ ಹೆಗಡೆ

ಶ್ರೀ ರಾಮಕೃಷ್ಣ ವಾಸುದೇವ ಭಟ್ಟ ಹಾಗೂ ಶ್ರೀಮತಿ ಭಾರತಿ ಭಟ್ಟ ಸುಪುತ್ರಿಯಾದ ಅವರು ಬಿಎಡ್, ಎಂಎ ಪದವೀಧರೆ. ಅವರು ಚಿಕ್ಕಂದಿನಿಂದಲೇ ಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದು, ಶಾಲಾ-ಕಾಲೇಜು ದಿನಗಳಲ್ಲಿಯೇ ರಾಜ್ಯಮಟ್ಟದ ಸ್ಪರ್ಧೆಗಳ ವಿಜೇತರಾಗಿರುತ್ತಾರೆ.

10 ನೇ ವರ್ಷದಿಂದ ವಿದುಷಿ ಸೀಮಾ ಭಾಗ್ವತರಲ್ಲಿ ಭರತನಾಟ್ಯ ಅಭ್ಯಾಸ ಪ್ರಾರಂಭಿಸಿ ವಿದ್ವತ್ ಪ್ರಥಮ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ವಿದ್ವತ್ ಅಂತಿಮವನ್ನು ವಿದುಷಿ ರೇಖಾ ಬೆಳಗಾವಿ, ಕೆಲವು ನೃತ್ಯಬಂಧಗಳನ್ನು ಸಾಗರದ ವಿದ್ವಾನ್ ಜನಾರ್ಧನ ಭಟ್ಟ ಅವರಲ್ಲಿ ಕಲಿತರು.

300x250 AD

ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ (ಮಂತ್ರಾಲಯ, ಕದಂಬೋತ್ಸವ, ಕರಾವಳಿ ಉತ್ಸವ, ಹಂಪಿ ಉತ್ಸವ, ದೆಹಲಿ ಕರ್ನಾಟಕ ಸಂಘ, ಕಾಳಿ, ಮುಂಬೈ, ಮೈಸೂರು ದಸರಾ ಉತ್ಸವ) ನೀಡಿರುತ್ತಾರೆ. ಅವರೊಬ್ಬ ಯಕ್ಷಗಾನ ಕಲಾವಿದೆಯಾಗಿದ್ದು ಅವರ ಗುರು ಸತೀಶ ಉಪಾಧ್ಯಾಯ ಉಡುಪಿ. ಅವರು ಕರ್ನಾಟಕ ಸಂಗೀತವನ್ನು ಗುರು ವಾಣಿ ಉಡುಪ ಅವರಲ್ಲಿ, ನಟುವಾಂಗದ ಪ್ರಾಥಮಿಕ ಹಂತ ಕಲಾಮಂಡಲಂ ಕಾರ್ತಿಕ ಹರಿಕೃಷ್ಣ ಅವರಲ್ಲಿ ಅಭ್ಯಾಸ ಮಾಡಿರುತ್ತಾರೆ. ನಾಟಕರಂಗ, ಧಾರಾವಾಹಿ (ಕಾಲದ ಕಡಲು), ಕ್ಷೇತ್ರಗಳಲ್ಲಿ ನಟನೆಯ ಅನುಭವವೂ ಇದೆ.

2013ರಲ್ಲಿ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ (ರಿ) ಸ್ಥಾಪಿಸಿ ಈಗ ದಶಮಾನೋತ್ಸವದ ಸಂಭ್ರಮದಲ್ಲಿದೆ. 500 ಕ್ಕೂ ಹೆಚ್ಚು ಮಕ್ಕಳಿಗೆ ಬೋಧನೆ. ಜೂನಿಯರ್, ಸೀನಿಯರ್ ಪರೀಕ್ಷೆಗಳಲ್ಲಿ ಮಕ್ಕಳು ಉತ್ತಮ ಸಾಧನೆ. ಹಲವಾರು ಸಂಘ ಸಂಸ್ಥೆಗಳ ಗೌರವ ಸಂಮಾನ ಕೂಡ ಆಗಿದೆ. ಶಿವಲೀಲಾಮೃತ, ಸಪ್ತ ತಾಂಡವ, ಬಾಲ ರಾಮಾಯಣ ಇವರು ಸಂಯೋಜಿಸಿದ ನೃತ್ಯ ರೂಪಕಗಳು.

ತಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ

ಕರುಳ ಬಯಕೆ ಬಳ್ಳಿಗೆ ಉಸಿರುಕೊಟ್ಟ ದಿನವದು
ಎಂದೂ ಮರೆಯದ ಆನಂದದೊಳು
ಮರೆತೆವಂದು ಜಗದೆಲ್ಲ ಅಳಲನ್ನು
ಪುಟ್ಟ ಹೆಜ್ಜೆಯನಿಟ್ಟು ನಲಿವ ಪಾದಗಳಿಗೆ
ಗುರು ಮುಖೇನ ಸಂಸ್ಕಾರವಿತ್ತು ಬೆಳೆಸಿದೆವು ನಮ್ಮಿಂದಾದ ರೀತಿ-ನೀತಿಗಳಲಿ
ವಿಧಿಯುಕ್ತ ವಿದ್ವತ್ ಸಾಧನೆಯನ್ನು
ತಮ್ಮೆಲ್ಲರ ಮುಂದಿಟ್ಟು ಆಶೀರ್ವಾದ ಪಡೆಯಲು
ಗುರು-ಹಿರಿಯರನುಮತಿಯಂತೆ ನಿಶ್ಚಯಿಸಿದ ಈ ಶುಭದಿನಕ್ಕೆ ಕೋರುವೆವು ತಮಗೆಲ್ಲ ಆದರದ ಸ್ವಾಗತ.

ಬಿಂದು ಹಾಗೂ ದತ್ತಾತ್ರೇಯ ಹೆಗಡೆ ಹಾಗೂ
ಕುಟುಂಬದವರು

Share This
300x250 AD
300x250 AD
300x250 AD
Back to top