ಹೊನ್ನಾವರ : ಡಾ.ಕುಸುಮಾ ಸೊರಬ ಅವರು ಸ್ನೇಹಕುಂಜ ಸಂಸ್ಥೆಯನ್ನು ಸ್ಥಾಪಿಸಿ ವಿವೇಕಾನಂದ ಆರೋಗ್ಯಧಾಮದ ಮೂಲಕ ಆರ್ಯುವೇದ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿ ಚಿಕಿತ್ಸೆ ನೀಡಿ ಜನಾರೋಗ್ಯ ಕಾಪಾಡಿದರು ಎಂದು ಡಾ. ಮಹೇಶ ಪಂಡಿತ ಹೇಳಿದರು.
ಅವರು ಕಾರಕೊಡ ಸ್ನೇಹಕುಂಜ ಸಂಸ್ಥೆಯಲ್ಲಿ ಡಾ. ಕುಸುಮಾ ಸೊರಬ ಅವರ 86ನೇ ಜನ್ಮದಿನಾಚರಣೆ ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಪರಿಸರ ಕಾರ್ಯಕರ್ತರ ಮತ್ತು ನರ್ಸಿಂಗ್ ತರಬೇತಿ ಪಡೆದವರ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕುಸುಮಾ ಸೊರಬ ಅವರು ಕಾರಕೊಡಿನಲ್ಲಿ ಅಪ್ಪಟ್ಟ ಗಾಂಧಿ ಆದರ್ಶದಲ್ಲಿ ನಿಸರ್ಗ ಚಿಕಿತ್ಸೆ, ಆರ್ಯುವೇದದಂತಹ ಚಿಕಿತ್ಸಾ ವಿಧಾನವನ್ನು ಅಳವಡಿಸಿ ಆರೋಗ್ಯ ಸೇವೆ ನೀಡಿದ್ದಲ್ಲೇ ಪರಿಸರ ಚಳುವಳಿಯ ನೇತಾರರಾಗಿ ಅನೇಕ ಹೋರಾಟಗಳನ್ನು ಮುನ್ನೆಡೆಸಿಕೊಂಡು ಹೋಗಿದ್ದರು ಎಂದರು.
ಕಾರ್ಯಕ್ರಮವನ್ನು ಸ್ನೇಹಕುಂಜ ಸಂಸ್ಥೆಯ ಬೇರೆ ಬೇರೆ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಗೌರಿ ಹೆಗಡೆ ಉದ್ಘಾಟಿಸಿ ಮಾತನಾಡಿ, ಕುಸುಮಾ ಸೊರಬ ಅವರ ಆದರ್ಶ ಗುಣಗಳು ಇಲ್ಲಿ ತರಬೇತಿ ಪಡೆದ ದಾಯಿ ವಿದ್ಯಾರ್ಥಿಗಳು ಮತ್ತು ಪರಿಸರ ಕಾರ್ಯಕರ್ತರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸುತ್ತಿದ್ದಾರೆ ಎಂದರು.
ಸಂಸ್ಥೆಯ ವಿಶ್ವಸ್ಥರಾದ ಡಾ. ಪ್ರಕಾಶ ಮೇಸ್ತಾ ಅವರು ಮಾತನಾಡಿ, ಡಾ. ಕುಸುಮಾ ಸೊರಬ ಅವರ ಜೀವನವೇ ಒಂದು ಆದರ್ಶವಾಗಿತ್ತು. ಸರಳ ಜೀವನ ತಾನು ಅಳವಡಿಸಿಕೊಂಡು ಬೇರೆಯವರಿಗೆ ಮಾದರಿಯಾಗಿದ್ದರು. ಪರಿಸರ ಮತ್ತು ಜನಜೀವನಕ್ಕೆ ಮಾರಕವಾಗುವ ಯಾವುದೇ ಯೋಜನೆಗಳನ್ನು, ಯಾವುದೇ ಸರಕಾರ ಜಾರಿಗೊಳಿಸಿದ್ದರೂ ತೀವ್ರವಾಗಿ ಖಂಡಿಸಿ ಬಿದಿಗಿಳಿಯುತ್ತಿದ್ದರು ಎಂದರು.
ಸಂಸ್ಥೆಯ ಸಂಯೋಜಕರಾಗಿದ್ದ ರವೀಂದ್ರ ಶೆಟ್ಟಿ ಅವರು ಮಾತನಾಡಿ, ಡಾ. ಕುಸುಮಾ ಸೊರಬ ಅವರೊಂದಿಗೆ ಕೊನೆಯ ಕ್ಷಣದವರೆಗೂ ಇದ್ದು, ಅವರ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಲು ಅಪೂರ್ವ ಅವಕಾಶ ತನಗೆ ಒದಗಿ ಬಂದಿರುವುದು ನನ್ನ ಜೀವನದ ಅತೀ ಮುಖ್ಯವಾದ ಸಂದರ್ಭವಾಗಿದೆ. ಅವರ ಆದರ್ಶ ಗುಣಗಳು ಮತ್ತು ಅವರಲ್ಲಿದ್ದ ಸಾಮಾಜಿಕ ಕಳಕಳಿ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಂತಹ ವ್ಯಕ್ತಿತ್ವ ಅವರದಾಗಿತ್ತು ಎಂದರು.
ಪರಿಸರ ಕಾರ್ಯಕರ್ತ ಹಾಗೂ ಪತ್ರಕರ್ತ ಕೆ.ರಮೇಶ ಅವರು ಮಾತನಾಡಿ, ಪರಿಸರ ಹೋರಾಟಗಾರ್ತಿ ಡಾ. ದಿ.ಕುಸುಮಾ ಸೊರಬ ಅವರ ಪರಿಸರ ಚಳುವಳಿ ಉತ್ತರ ಕನ್ನಡ ಜಿಲ್ಲೆಯ ಚರಿತ್ರೆಯಲ್ಲಿ ಅಜರಾಮರವಾಗಿದೆ. ಅವರು ಪಕ್ಷಬೇಧವಿಲ್ಲದೇ ಯಾವುದೇ ಸರಕಾರದ ವಿರುದ್ಧ ಪರಿಸರಕ್ಕೆ ಹಾನಿಯುಂಟಾದರೆ ದಿಟ್ಟವಾಗಿ ವಿರೋಧಿಸುತ್ತಿದ್ದರು. ಅಂತಹ ವ್ಯಕ್ತಿತ್ವ ಜಿಲ್ಲೆಯಿಂದ ಕಣ್ಮರೆಯಾಗಿರುವುದು ಜಿಲ್ಲೆಯ ದುರಂತ. ಡಾ. ಕುಸುಮಾ ಸೊರಬ ಅವರ ಧೈರ್ಯ ನಮ್ಮಲ್ಲಿಯೂ ಸಹ ಅಳವಡಿಸಿಕೊಳ್ಳಲು ನಮಗೆ ಸಾಧ್ಯವಾಗಿದೆ ಎಂದರು.
ಸಂಸ್ಥೆಯಲ್ಲಿ ದಾಯಿ ವಿದ್ಯಾರ್ಥಿಗಳಾಗಿ ತರಬೇತಿ ಪಡೆದ ಆಶಾ ಗುನಗಾ, ಸಂಗೀತಾ ನಾಯ್ಕ, ಚಂದ್ರಕಲಾ ನಾಯ್ಕ ಬರ್ಗಿ, ಮಹಾಲಲಕ್ಷ್ಮೀ ಶಿರಸಿ, ಮಹಾಲಕ್ಷ್ಮೀ ಮುರ್ಡೇಶ್ವರ, ಶಾರದಾ ಪುರಾಣಿಕ, ಪರಿಸರ ಕಾರ್ಯಕರ್ತೆ ಚಂದ್ರಕಲಾ ಗಾವಡಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಹನಾ ಹೊಳ್ಳಾ ಮುಂತಾದವರು ಡಾ. ಕುಸುಮಾ ಸೊರಬ ಅವರ ಒಡನಾಟ ಮತ್ತು ತಮ್ಮ ಮೇಲೆ ಅವರು ಬೀರಿದ ಪ್ರಭಾವದ ಕುರಿತು ಮಾತನಾಡಿದರು.
ರವೀಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಕೆ.ರಮೇಶ ಕಾರ್ಯಕ್ರಮ ನಿರ್ವಹಿಸಿದರು, ನಾರಾಯಣ ಭಂಡಾರಿ ವಂದಿಸಿದರು. ಡಾ.ಕುಸುಮಾ ಸೊರಬ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.