ಶಿರಸಿ: ಗ್ರಾಮೀಣ ಮಹಿಳೆಯರು ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಮನೆಯ ಹಿತ್ತಲಿನಲ್ಲಿ ಅಥವಾ ಹೊಲಗಳಲ್ಲಿ ಸಾವಯವ ಪದ್ಧತಿ ಅನುಸರಿಸಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಬೇಕೆಂದು ಶಿರಸಿ ತೋಟಗಾರಿಕೆ ಕಾಲೇಜಿನ ಪ್ರಾಚಾರ್ಯ ಡಾ. ಅಮರ ನಂಜುಂಡೇಶ್ವರ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿರಸಿ ಯೋಜನಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಮಂಗಳವಾರ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಅಡಿಯಲ್ಲಿ ಹಮ್ಮಿಕೊಂಡ ಮಾದರಿ ಪೌಷ್ಟಿಕ ಕೈ ತೋಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದೃಡ ಆರೋಗ್ಯಕ್ಕೆ ನಾವೆಲ್ಲರೂ ಮೊದಲು ಆದ್ಯತೆ ನೀಡಬೇಕು. ಮನುಷ್ಯ ತನ್ನ ದಿನನಿತ್ಯದ ಆರೋಗ್ಯ ಸುಧಾರಣೆಗೆ ಪ್ರತಿನಿತ್ಯ 240ಗ್ರಾಂ ಸೊಪ್ಪು, ತರಕಾರಿಗಳನ್ನು ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕ ಕೈತೋಟ ಉಪಯುಕ್ತವಾಗಿದೆ. ಪೌಷ್ಟಿಕ ಕೈತೋಟದಲ್ಲಿ ನಾನಾ ಜಾತಿಯ ಹಣ್ಣು ಹಾಗೂ ತರಕಾರಿಗಳನ್ನು ಹಂಗಾಮಿಗನುಸಾರವಾಗಿ ಬೆಳೆದು ಕುಟುಂಬದ ಪೌಷ್ಟಿಕ ಅವಶ್ಯಕತೆ ಪೂರೈಸುವುದರ ಜತೆಗೆ ಹೆಚ್ಚಿನ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಿ ಆದಾಯ ಪಡೆಯಬಹುದು. ಕೃಷಿ ಉತ್ಪಾದನೆಯಲ್ಲಿ ರೈತ ಮಹಿಳೆಯರು ಅಪಾರ ಕೊಡುಗೆ ನೀಡುತ್ತಿದ್ದು, ಅವರಿಗೆ ಕೃಷಿ ತಂತ್ರಜ್ಞಾನ ನಿರ್ವಹಣೆ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಮೂಲಕ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ನಿರ್ದೇಶಕ ಬಾಬುನಾಯ್ಕ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮಾನವ ಸಂಪನ್ಮೂಲ ಬಳಸಿ ಸಾವಯವ ಕೃಷಿ ನಡೆಸುವ ಮೂಲಕ ಆರೋಗ್ಯ ಪೂರ್ಣ ಮಾದರಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಿಕಾ, ಸೇವಾ ಪ್ರತಿನಿಧಿಗಳಾದ ರಾಧ, ವಿಶಾಲಪ್ರಭು ಹಾಗೂ ಮಾದರಿ ಕೈತೋಟ ರಚನೆಗೆ ಆಯ್ಕೆಯಾದ 30 ಸದಸ್ಯರು ಭಾಗವಹಿಸಿದ್ದರು.