ಬನವಾಸಿಯಲ್ಲಿ ಮನರಂಜಿಸಿದ ‘ಮೂರು ಮುತ್ತು’ ನಾಟಕ
ಬನವಾಸಿ: ಮೂರು ಮುತ್ತು ನಾಟಕ ಕಳೆದ 30 ವರ್ಷಗಳಿಂದ ಸುಮಾರು 2500 ಪ್ರದರ್ಶನ ಕಂಡಿದೆ. ಪ್ರತಿವರ್ಷ 50-60 ‘ಮೂರು ಮುತ್ತು’ ನಾಟಕಗಳನ್ನು ನಾವು ಪ್ರದರ್ಶಿಸುತ್ತಿದ್ದೇವೆ. ಕಾಲಕ್ಕೆ ತಕ್ಕಂತೆ ನಾವು ಅದರಲ್ಲಿ ಬದಲಾವಣೆ ತಂದಿದ್ದೇವೆ. ನಮಗೆ ಮರುಜೀವ ಕೊಟ್ಟ ನಾಟಕ ಇದು ಎಂದು ಮೂರು ಮುತ್ತು ನಾಟಕದ ಖ್ಯಾತ ಕಲಾವಿದ ಸತೀಶ್ ಪೈ ಹೇಳಿದರು.
ಇಲ್ಲಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ರೂಪಕಲಾ ಕುಂದಾಪುರ ಕಲಾವಿದರು ಹಮ್ಮಿಕೊಂಡಿದ್ದ ಮೂರು ಮುತ್ತು ನಾಟಕದ ಸಂದರ್ಭದಲ್ಲಿ ಸಂಘಟಕರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನಾಟಕದಲ್ಲಿ ಮನರಂಜನೆ ಮುಖ್ಯ. ನಮ್ಮ ನಾಟಕದಲ್ಲಿ ನಾವು ಎಲ್ಲಿಯೂ ಅಶ್ಲೀಲತೆ ಬಳಸಲ್ಲ. ನಾಟಕದಲ್ಲಿ ಸಂದೇಶ ಇರಬೇಕು, ಇದ್ದರೆ ಒಳ್ಳೆಯದು. ಆದರೆ ಸಂದೇಶ ಇಲ್ಲದಿದ್ದ ಕೂಡಲೇ ನಾಟಕವನ್ನು ನಿರ್ಲಕ್ಷಿಸಲೂಬಾರದು. ನಾಟಕ, ಕಲಾವಿದ ಅಂದ ಕೂಡಲೇ ಅಸಡ್ಡೆ ಬೇಡ. ನಾಟಕದಲ್ಲಿ ನಿಯತ್ತು, ನಿಷ್ಠೆಯಿಂದ ದುಡಿದರೆ ಹೆಸರು ಮತ್ತು ಹಣ ಸಂಪಾದಿಸಬಹುದು. ನಾಟಕ ಕಲೆ ನಿರಂತರವಾಗಿ ಮುಂದುವರಿಯಬೇಕು. ಟಿ.ವಿ. ಮೊಬೈಲ್ ನ ಹಾವಳಿಗೆ ನಾಟಕಗಳು ಅಳಿವಿನಂಚಿನಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೂರು ಮುತ್ತು ನಾಟಕ ಮರುಜೀವ ತಂದು ಕೊಟ್ಟಿದೆ. 15 ಬಾರಿ ವಿದೇಶ ಪ್ರಯಾಣ ಮಾಡಿ ವಿದೇಶದಲ್ಲಿ ನಾಟಕ ಪ್ರದರ್ಶನ ನೀಡಿದ್ದೆವೆ. ಜನರನ್ನು ರಂಜಿಸುವುದೇ ನಮ್ಮ ತಂಡದ ಮುಖ್ಯ ಗುರಿಯಾಗಿದೆ. ಜನರಲ್ಲಿ ಈ ನಾಟಕದ ಕುರಿತು ಅಪಾರ ಗೌರವವಿದೆ. ಇನ್ನೂ ಹೆಚ್ಚಿನ ಪ್ರೀತಿ ವಿಶ್ವಾಸ ಕಲಾವಿದರ ಮೇಲಿರಲಿ ಎಂದರು.
ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಶ್ರೀನಿಧಿ ಮಂಗಳೂರು ಮಾತನಾಡಿ, ನಾವೆಲ್ಲರೂ ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದರು. ದೇವಸ್ಥಾನ ಆಡಳಿತ ಮಂಡಳಿಯಿಂದ ಕಲಾವಿದರಾದ ಸತೀಶ ಪೈ, ಸಂತೋಷ ಪೈ ಅವರನ್ನು ಸನ್ಮಾನಿಸಲಾಯಿತು. ನಾಟಕ ವಿಕ್ಷಣೆಗೆ ಸಾವಿರಾರು ಜನ ಆಗಮಿಸಿದ್ದರು.