ದಾಂಡೇಲಿ : ನಗರದ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಂದ ಸಮೂಹ ಭರತನಾಟ್ಯ ಮತ್ತು ಮಹಿಳಾ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ನಾಟ್ಯಾಂಜಲಿ ಕಲಾ ಕೇಂದ್ರ, ಸಹ್ಯಾದ್ರಿ ಲಲಿತ ಕಲಾ ಕೇಂದ್ರ, ಸಂಸ್ಕಾರ ಸಹಕಾರ ಭಾರತಿ ಕೇಂದ್ರ ಶಂಕರ ಮಠ ಮತ್ತು ಭಾರತೀಯ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಮೂಹ ಭರತನಾಟ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿತು.
ಇದೇ ಸಂದರ್ಭದಲ್ಲಿ ಆರು ಜನ ಮಹಿಳಾ ಸಾಧಕರುಗಳಾದ ದಾಂಡೇಲಿ ತಾಲೂಕಿನ ಹಿರಿಯ ನ್ಯಾಯವಾದಿ ಸುಮಿತ್ರಾ.ಕೆ ಮತ್ತು ಮಾಧುರಿ, ಹಳಿಯಾಳ ತಾಲೂಕಿನ ಪಲ್ಲವಿ ಯರಗಟ್ಟಿ ಮತ್ತು ವೀಣಾ ಉಪ್ಪಿನವರ, ಜೋಯಿಡಾ ತಾಲೂಕಿನ ಗೀತಾ ರವಿದಾಸ್ ಮಿರಾಶಿ ಮತ್ತು ಸೋನಾಲಿ ವೆಳೀಪ್ ಅವರನ್ನು ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ ಎಸ್ ಬಾಲಮಣಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹ್ವಾಣ್, ಖಜಾಂಚಿ ಅಶುತೋಷ ಕುಮಾರ್ ರಾಯ್, ಪಿಎಸ್ಐ ಗಳಾದ ಯಲ್ಲಪ್ಪ.ಎಸ್ ಮತ್ತು ಕಿರಣ್ ಪಾಟೀಲ್ ಹಾಗೂ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.