ಮುಂಡಗೋಡ: ಹಿಂದುಳಿದ ತಾಲೂಕುಗಳ ವಿಭಾಗದಲ್ಲಿ ಮುಂಡಗೋಡ ತಾಲೂಕನ್ನು ಗುರುತಿಸಿರುವುದಕ್ಕಾಗಿ ಜನರು ಕೀಳರಿಮೆ ಭಾವನೆ ಹೊಂದುವ ಬದಲಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಸಿಕೊಂಡರೆ ಜಿಲ್ಲೆಯಲ್ಲಿಯೇ ಮಾದರಿ ತಾಲೂಕಾಗಿ ಹೊರಹೊಮ್ಮಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಹೇಳಿದರು.
ಅವರು ಸೋಮವಾರ ಮುಂಡಗೋಡ ತಾಲೂಕಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಜುಲೈ 4 ರಿಂದ ಸೆಪ್ಟೆಂಬರ್ 30ರ ವರೆಗೆ ನಡೆದ ಸಂಪೂರ್ಣತಾ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಮೂರು ತಿಂಗಳಿನಿಂದ ನಡೆದ ಅಭಿಯಾನದಲ್ಲಿ ನಿಗದಿಪಡಿಸಲಾಗಿದ್ದ 6 ಸೂಚ್ಯಂಕಗಳ ಪೈಕಿ 5 ಸೂಚ್ಯಂಕಗಳಲ್ಲಿ 100 ಪ್ರತಿಶತ ಗುರಿ ಸಾಧಿಸಿರುವುದು ಹೆಮ್ಮೆಯ ಸಂಗತಿ. ಕಡಿಮೆ ಅವಧಿಯಲ್ಲಿ ಈ ಎಲ್ಲ ಅಂಶಗಳಲ್ಲಿ ಗುರಿಸಾಧಿಸುವುದು ಸಣ್ಣ ವಿಷಯವಾಗಿರಲಿಲ್ಲ. ಆದರೆ ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು ಮತ್ತು ಸಾರ್ವಜನಿಕರ ಸಹಕಾರ ಮಹತ್ವದ್ದಾಗಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಕಾಂಕ್ಷಿ ಕಾರ್ಯಕ್ರಮದ ನಿಗದಿತ ಎಲ್ಲ ಸೂಚ್ಯಂಕಗಳಲ್ಲಿ ಗುರಿ ಸಾಧಿಸಿ, ತಾಲೂಕನ್ನು ಅಭಿವೃದ್ಧಿ ಹೊಂದಿದ ತಾಲೂಕಾಗಿ ರೂಪಿಸಲು ಎಲ್ಲರು ಶ್ರಮಿಸೋಣ ಎಂದರು.
ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕಾರ್ಯಕ್ರಮಗಳು, ತರಬೇತಿ, ಮನೆ ಮನೆ ಭೇಟಿ, ಸ್ಪರ್ಧೆಗಳು, ಕಾರ್ಯಾಗಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲಾಗಿದೆ. ಈ ಕಾರ್ಯಕ್ರಮಗಳು ಸಂಪೂರ್ಣತಾ ಅಭಿಯಾನಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ದಿನಗಳಲ್ಲಿಯೂ ಮುಂದುವರಿಸಿಕೊಂಡು ಹೋಗಬೇಕು. ಆ ಮೂಲಕ ತಾಲೂಕಿನ ಸರ್ವತೋಮುಖ ಪ್ರಗತಿ ಕಾರಣವಾಗಬೇಕು ಎಂದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ, ಶಿಶುಗಳಿಗೆ ಅನ್ನ ಪ್ರಾಸನ, ಹುಟ್ಟು ಹಬ್ಬ ಆಚರಣೆ ನಡೆಸಲಾಯಿತು. ನಂತರ ಅಭಿಯಾನದ ಯಶಸ್ಸಿಗೆ ಕಾರಣವಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಅಭಿಯಾನದ ವೇಳೆ ವಿವಿಧ ಕಾರ್ಯಕ್ರಮದಲ್ಲಿ ಶ್ರಮವಹಿಸಿದ ಎಲ್ಲರಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಯಿತು.
ಕಾರ್ಯಕ್ರಮದ ಬಳಿಕ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಎನ್.ಆರ್.ಎಲ್.ಎಮ್. ಸಂಜೀವಿನಿ ಒಕ್ಕೂಟದ ಶ್ರೀ ಗಜಲಕ್ಷ್ಮೀ ಮಹಿಳಾ ಸ್ವ ಸಹಾಯ ಸಂಘದ ನೂತನ ಶ್ರೀ ಸಾಯಿ ಶೇಂಗಾ ಚಿಕ್ಕಿ ತಯಾರಿಕಾ ಘಟಕವನ್ನು ಉದ್ಘಾಟಿಸಿ, ಘಟಕವನ್ನು ವೀಕ್ಷಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ನಾಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ಆರಂಭಿಸಿದ ಸಂಜೀವಿನಿ ಡಿಜಿ ಶಾಲಾ ಕೇಂದ್ರವನ್ನು ಉದ್ಘಾಟಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ್ವರಿ ಕದಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮು ಬಯಲುಸೀಮೆ, ತಾಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಭರತ, ಪಶು ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ಹೆಗಡೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.