Slide
Slide
Slide
previous arrow
next arrow

ದೈವಭಕ್ತಿ ಕ್ಷೀಣವಾದರೆ ಪತನದ ಹಾದಿ ತುಳಿದಂತೆ: ರಾಘವೇಶ್ವರ ಶ್ರೀ

300x250 AD

ಹೊನ್ನಾವಾರ : ಗುರುಭಕ್ತಿ ಹಾಗೂ ದೈವಭಕ್ತಿ ಇದ್ದರೆ ಯಾರೂ ವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಅದು ಕ್ಷೀಣವಾದರೆ ಸಮಸ್ಯೆಗಳು ಉದ್ಭವಿಸಿತು ಎಂದೇ ಅರ್ಥ. ಇವು ಪತನದ ಹೆಜ್ಜೆಗಳು ಎಂದೇ ಅರ್ಥ. ಗುರುವನ್ನು ಮರೆಯಬೇಡಿ, ಶಿವನನ್ನು ಮರೆಯಬೇಡಿ ಅಂದರೆ ದೇವನನ್ನು ಮರೆಯಬೇಡಿ ಇದು ಬದುಕಿನ ತತ್ವ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ವಿವರಿಸಿದರು. ಅವರು ತಾಲೂಕಿನ ಕೆಕ್ಕಾರಿನ ನವರಾತ್ರಿ ನಮಸ್ಯಾ ಕಾರ್ಯಕ್ರಮದಲ್ಲಿ ಮೂರನೇ ದಿನದ ಲಲಿತೋಪಾಖ್ಯಾನದ ಆಶೀರ್ವಚನ ನೀಡಿದರು.

ಜೀವನದಲ್ಲಿ ಬೇಡದ ಸಂಬಂಧಗಳು ಬೇಡ ಎಂದರೂ ಬಂದು ಅಂಟಿಕೊಳ್ಳುತ್ತವೆ. ಒಳ್ಳೆಯ ಸಂಬಂಧಗಳು ದುರ್ಲಭ. ಅದರಲ್ಲಿಯೂ ಮಹಾತ್ಮರ ಸಂಬಂಧಗಳು. ಮಹಾಪುರುಷರ ಸಂಬಂಧಗಳು ಏರ್ಪಡಬೇಕಾದರೆ ಜನ್ಮಜನ್ಮಾಂತರಗಳ ಪುಣ್ಯ ಬೇಕು. ಆತ್ಮ ಶುದ್ಧಿ ಬೇಕು ಎಂದರು.

ಮಹಾತ್ಮರ ಜೊತೆಗೆ ಸಂಬಂಧಗಳು ಏರ್ಪಡುವಾಗ ಅವರು ಕೆಲವು ಗೆರೆಗಳನ್ನು ಹಾಕುತ್ತಾರೆ. ಆ ಗೆರೆಗಳನ್ನು ಮೀರಬಾರದು. ಲಕ್ಷ್ಮಣ ರೇಖೆಯನ್ನು ಉಲ್ಲೇಖಿಸಿದ ಶ್ರೀಗಳು, ಮಹಾತ್ಮರು ಸಂಬಂಧದ ಪ್ರಾರಂಭದಲ್ಲಿಯೇ ಹಾಕುವ ಗೆರೆಗಳನ್ನು ಮೀರಬಾರದು ಅದನ್ನು ಮೀರಿದರೆ ಅನರ್ಥ ಉಂಟಾಗುತ್ತದೆ ಎಂದು ವಿವರಿಸಿದ್ದರು.

ದಕ್ಷ ದುರ್ಗೆಯನ್ನು ಕುರಿತು ತಪಸ್ಸು ಮಾಡಿದ. ಆಕೆ ಆತನ ಮಗಳಾಗಿ ಹುಟ್ಟಿ ಬರಲು ಒಪ್ಪಿಕೊಳ್ಳುತ್ತಾಳೆ. ದಾಕ್ಷಾಯಿಣಿಯಾಗಿ ಹುಟ್ಟಿ ಬರಲು ಒಪ್ಪಿಕೊಂಡ ತಾಯಿ, ನೀನು ತನ್ನನ್ನು ಅನಾದರ ಮಾಡಿದ ದಿನ ದೇಹತ್ಯಾಗ ಮಾಡುವುದಾಗಿ ಒಂದು ಗೆರೆಯನ್ನು ಹಾಕಿದಳು. ಎಂದು ನೀನು ನನ್ನಲ್ಲಿ ಮಂದಾದರನಾಗುತ್ತಿಯೋ ಆ ದಿನ ದೇಹವನ್ನು ಬಿಡುತ್ತೇನೆ ಎಂದಿದ್ದ ಮಾತನ್ನು ಕೊನೆಯಲ್ಲಿಯೂ ಪಾಲಿಸಿಗಳು ಎಂದು ಶ್ರೀಗಳು ವಿವರಿಸಿದರು. ಸೃಷ್ಟಿಕರ್ತ, ಪಾಲನಕರ್ತ, ಲಯಕರ್ತನನ್ನು ಮದುವೆಗೆ ಒಪ್ಪಿಸಿದ ಸಂದರ್ಭವನ್ನು ಉಲ್ಲೇಖಿಸಿದ ಶ್ರೀಗಳು, ಎಂದು ಆಕೆ ತನ್ನ ಮಾತನ್ನು ಸ್ವೀಕರಿಸುವುದಿಲ್ಲವೋ ಅಂದೆ ಇದರ ಮುಕ್ತಾಯ ಎಂದು ಈಶ್ವರನು ಹಾಕಿದ ಗೆರೆಯನ್ನು ಉದಾಹರಣೆಯಾಗಿ ನೀಡಿದರು.

300x250 AD

ಪರ್ವತಕ್ಕೆ ಸ್ಥೂಲ, ಸೂಕ್ಷ್ಮ, ಪರ ಎಂಬ ಮೂರು ಸ್ವರೂಪವಿದೆ. ನೋಡಲು ಕಲ್ಲು ಬಂಡೆಗಳಿಂದ ಕೂಡಿದ್ದು ಪರ್ವತ, ಸೂಕ್ಷ್ಮವಾಗಿ ಗಮನಿಸಿದರೆ ದೇವತೆ, ಇನ್ನೂ ಗಮನಿಸಿದರೆ ಅದು ಪರಬ್ರಹ್ಮ ಎಂದು ಶ್ರೀಗಳು ವಿವರಿಸಿದರು. ಶಿವಭಕ್ತಿ, ಗುರು ಭಕ್ತಿ ಇರುವವರನ್ನು ಯಾರು ಮೊದಲು ಸಾಧ್ಯವಿಲ್ಲ ಅಂತವರು ದೇವರಾಗಲು ಸಾಧ್ಯ ಎಂದು ಶ್ರೀಗಳು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ರಘೂತ್ತಮ ಮಠ ಮಹಾ ಸಮಿತಿ, ಕ್ರಿಯಾ ಸಮಿತಿ ಹಾಗೂ ಮಾತೃ ನಮಸ್ಯಾ ಸಮಿತಿಯ ಅಧ್ಯಕ್ಷ ಸುಬ್ರಾಯ ಭಟ್ಟ, ಮಾತೃ ನಮಸ್ಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಭಟ್ಟ ಸೂರಿ, ಮಂಜುನಾಥ ಭಟ್ಟ ಸುವರ್ಣಗದ್ದೆ, ಹೊನ್ನಾವರ ಮಂಡಲ ಅಧ್ಯಕ್ಷರಾದ ಆರ್.ಜಿ.ಹೆಗಡೆ, ಜಿ.ಜಿ.ಭಟ್ಟ, ಮಾತೃ ವಿಭಾಗದ ಲಲಿತಾ ಹೆಬ್ಬಾರ, ಕೆ.ಎನ್ ಹೆಗಡೆ ಹಾಗೂ ಮಹಾ ಸಮಿತಿ, ಕ್ರಿಯಾ ಸಮಿತಿ ಹಾಗೂ ಮಾತೃ ನಮಸ್ಯಾ ಸಮಿತಿಯ ಪದಾಧಿಕಾರಿಗಳು, ಗುರುಭಕ್ತ ಸಹಸ್ರಾರು ಜನರು ಹಾಜರಿದ್ದರು.

Share This
300x250 AD
300x250 AD
300x250 AD
Back to top