ಕಾರವಾರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ , ಗ್ರಾಪಂ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಬಿಎಫ್‌ಟಿ, ಜಿಕೆಎಂ, ಮೇಟ್, ಇಂಜನೀಯರ್‌ಗಳು, ಐಇಸಿ ಸಂಯೋಜಕರು ಒಗ್ಗೂಡಿಕೊಂಡು ನಿರಂತರವಾಗಿ ಅಭಿಯಾನ ನಡೆಸಿ ನವೆಂಬರ್ 11ರೋಳಗೆ ವಾರ್ಡ್ ಹಾಗೂ ನವೆಂಬರ್ 30ರೊಳಗೆ ಗ್ರಾಮ ಸಭೆ ನಡೆಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಸೂಚಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸ್ವೀಕರಿಸಬೇಕಿದೆ. ಈ ಕುರಿತು ಮನೆಮನೆಗೆ ಭೇಟಿ ನೀಡಿದ ವೇಳೆ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿಯಾಗಿದ್ದು, ಗಂಡು ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ ರೂ. 349/, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50 ರಿಯಾಯಿತಿ, ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರುಗಳಿಗೆ ನಿರ್ವಹಿಸುವ ಕೆಲಸಕ್ಕೆ/ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ. 10 ಕೆಲಸ ಪ್ರಮಾಣದಲ್ಲಿ ರಿಯಾಯಿತಿ, ಮಹಿಳಾ ಭಾಗವಹಿಸುವಿಕೆಯನ್ನು ಕನಿಷ್ಠ ಶೇ.60 ಪ್ರತಿಶತಕ್ಕೆ ಹೆಚ್ಚಿಸುವ ಕುರಿತು ಅಭಿಯಾನದ ವೇಳೆ ಜನರಿಗೆ ತಿಳಿಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು, ಪಿಡಿಒ, ಪಂಚಾಯಿತಿ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿಗಳಾದ ಕಾಯಕ ಬಂಧುಗಳು, ತಾಂಡಾ ರೋಜಗಾರ್ ಮಿತ್ರರು, ಗ್ರಾಮ ಕಾಯಕ ಮಿತ್ರರು ಬಿಎಫ್‌ಟಿಗಳು, ತಾಂತ್ರಿಕ ಸಹಾಯಕ ಅಭಿಯಂತರರು ಹಾಗೂ ಅನುಷ್ಠ್ಠಾನ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಬೇಕು ಮತ್ತು ತಮ್ಮ ವಾರ್ಡ್ಗಳ ಪ್ರತಿ ಮನೆಗೂ ಭೇಟಿ ನೀಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು “ಬೇಡಿಕೆ ಪೆಟ್ಟಿಗೆಯನ್ನು ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಮತ್ತು ಹಾಲಿನ ಕೇಂದ್ರಗಳಲ್ಲಿ ಸ್ಥಾಪಿಸಿ ಪ್ರತಿದಿನ ಸ್ವೀಕೃತವಾದ ಬೇಡಿಕೆಗಳನ್ನು ಅಕ್ಟೋಬರ್ 31 ರವರೆಗೆ ಅರ್ಜಿಗಳನ್ನು ಸಂಗ್ರಹಿಸಬೇಕು ಹಾಗೂ ಮೊಬೈಲ್ ಅಪ್ಲಿಕೇಶನ್ ಕೂಡ ಸಿದ್ದವಾಗಿದ್ದು, ಅದರ ಮೂಲಕವೂ ಸಾರ್ವಜನಿಕರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಗ್ರಾಪಂಗಳು ಗ್ರಾಮ ಸಭೆಯಲ್ಲಿ ಅನುಮೋದಿಸಿದ ವಾರ್ಷಿಕ ಕ್ರಿಯಾ ಯೋಜನೆಯನ್ನು ಡಿಸೆಂಬರ್ 5 ರೊಳಗಾಗಿ ತಾಪಂಗೆ ಸಲ್ಲಿಸಿ, ಎಲ್ಲಾ ಗ್ರಾಮಪಂಚಾಯಿತಿಗಳ ಕ್ರೋಢಿಕೃತ ತಾಲೂಕು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಮೋದಿಸಿ ಡಿಸೆಂಬರ್. 20 ರೊಳಗಾಗಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ರವರ ಅನುಮೋದನೆಗೆ ಸಲ್ಲಿಸಲು ಎಲ್ಲ ತಾಲ್ಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.