ಹೊನ್ನಾವರ : ತಾಲೂಕಿನ ಉಪ್ಪೊಣಿಯ ಕುಮಾರಿ ಎಸ್. ವೈಭವಿ ಹಾಗೂ ಸಂಗಡಿಗರು ರೂಬಿಕ್ಸ್ ಕ್ಯೂಬ್ (Rubik cube) ಮೂಲಕ ಎರಡು ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಎಸ್. ವೈಭವಿ, ಸಂಗಡಿಗರ ಜೊತೆಗೂಡಿ ರೂಬಿಕ್ಸ್ ಕ್ಯೂಬ್ (Rubik cube) ಮೂಲಕ ಎರಡು ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಈ ತಂಡ ಬ್ರಿಟನ್ ಹಾಗೂ ಕಜಕಿಸ್ತಾನ ದೇಶದ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ರೂಬಿಕ್ಸ್ ನ ಒಂದು ಬದಿಯಲ್ಲಿ ಭಾರತದ ಹಾಕಿ ಮೇಜರ್ ಧ್ಯಾನ್ ಚಂದ್, ಕ್ಯೂಬ್ ಹಿಂಬದಿಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಚಿತ್ರ ರಚಿಸಿ ದಾಖಲೆ ಪುಸ್ತಕ ಸೇರಿದ್ದು, ಈ ಎಲ್ಲಾ ಸಾಧಕರಿಗೆ ಇತ್ತೀಚಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಜಕಿಸ್ತಾನದ ಜೆಂಗಿಸ್ ಇಟ್ಟಾನೋವ್ 5100 ಕ್ಯೂಬ್ ಗಳೊಂದಿಗೆ 15878 ಚದರ್ ಮೀಟರ್ ಅಳತೆಯ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಮೂಲಕ ಗಿನ್ನಿಸ್ ದಾಖಲೆ(Guinnis World Record ) ಮಾಡಿದ್ದರು. ಹಟ್ಟಿಯಂಗಡಿ ಶಾಲೆಯ 50 ಮಕ್ಕಳು 6000 cube ಬಳಸಿ ಚಿತ್ರ ರಚನೆ ಮಾಡಿ ಕಜಕಿಸ್ತಾನ ದೇಶದ ದಾಖಲೆ ಮುರಿದಿದ್ದಾರೆ. ಇನ್ನು ರೂಬಿಕ್ಸ್ ಬ್ರಾಂಡ್ ಬ್ರಿಟನ್ನಿನಲ್ಲಿ 308 ಜನ ನಿರ್ಮಿಸಿದ್ದ ದಾಖಲೆಯನ್ನು ಹಟ್ಟಿಯಂಗಡಿ ಶಾಲೆಯ ವಿದ್ಯಾರ್ಥಿಗಳು ಮುರಿದಿದ್ದಾರೆ.
ಗಿನ್ನಿಸ್ ದಾಖಲೆಗೆ ದಾಖಲಿಸಿರುವ ಕು. ಎಸ್. ವೈಭವಿ ಕಾರವಾರ ಖದ್ರಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಹವಾಲ್ದಾರ ಸತೀಶ್ ನಾಯ್ಕ್ ಮತ್ತು ಮಾಜಿ ತಾ. ಪಂ. ಸದಸ್ಯೆ, ಹೊನ್ನಾವರ ಸೌಹಾರ್ದ ಬ್ಯಾಂಕ್ ಮೆನೇಜರ್ ಗಾಯತ್ರಿ ಸತೀಶ್ ನಾಯ್ಕ್ ರವರ ದಂಪತಿ ಪುತ್ರಿ ಆಗಿದ್ದಾಳೆ. ಈಕೆಯ ದೊಡ್ಡಪ್ಪ ಮಂಕಿ ಪೊಲೀಸ್ ಠಾಣೆಯ ಹವಾಲ್ದಾರ್ ಸುಬ್ರಹ್ಮಣ್ಯ ನಾಯ್ಕ್, ಚಿಕ್ಕಪ್ಪ ಗುತ್ತಿಗೆದಾರ ಸಂತೋಷ್ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.