ಹೊನ್ನಾವರ : ತಾಲೂಕಿನ ಗುಣವಂತೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ ದೊರೆತಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಯುನೆಸ್ಕೊದಿಂದ ಮಾನ್ಯತೆ ಪಡೆದ ಮೊದಲ ಯಕ್ಷಗಾನ ಸಂಸ್ಥೆಯಾಗಿದೆ. ಜೂ.11 ಹಾಗೂ 12ರಂದು ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಯನ್ನು ಅಧಿಕೃತವಾಗಿ ಗುರುತಿಸಲಾಯಿತು ಮತ್ತು ಆಯ್ಕೆ ಮಾಡಲಾಯಿತು. ಯುನೆಸ್ಕೊ (UNESCO) ಪ್ರಧಾನ ಕಚೇರಿಯಲ್ಲಿ ತನ್ನ ಹತ್ತನೇ ಅಧಿವೇಶನದಲ್ಲಿ, ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್ ಸರ್ಕಾರಿ ಸಮಿತಿಗೆ ಸಲಹಾ ಸೇವೆಗಳನ್ನು ನೀಡಲು 58 ಸರ್ಕಾರೇತರ ಸಂಸ್ಥೆಗಳಿಗೆ (NGOs) ಮಾನ್ಯತೆ ನೀಡಿದೆ. ಇದರಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಕೂಡ ಒಂದಾಗಿದೆ. ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಮಾನ್ಯತೆ ನೀಡಲಾಯಿತು. ಯುನೆಸ್ಕೊ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ ಎಂದು ಅವರು ತಿಳಿಸಿದ್ದಾರೆ.
ಯಕ್ಷಗಾನ ಸಂಸ್ಥೆಯೊಂದು ವಿಶ್ವ ಸಂಸ್ಥೆಯ ಮಾನ್ಯತೆಗೆ ಪಾತ್ರರಾಗಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರಂಭವಾಗಿ ದೊಡ್ಡಮಟ್ಟದಲ್ಲಿ ಬೆಳೆದ ಕೆರೆಮನೆ ಯಕ್ಷಗಾನ ಮಂಡಳಿ ಯಕ್ಷಗಾನ ರಂಗ ಭೂಮಿಯ ಇತಿಹಾಸವನ್ನು ಹಲವು ಸರ್ವ ಪ್ರಥಮಗಳ ದಾಖಲೆ ನಿರ್ಮಿಸಿದ್ದು ಈಗ ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರವಾಗಿದೆ. ಯುನೆಸ್ಕೋ ಮಾನ್ಯತೆ ಇಡಗುಂಜಿ ಮಂಡಳಿ ಸುದೀರ್ಘವಾಗಿ, ಯಕ್ಷಗಾನದ ಸಂವರ್ಧನೆ, ಪರಂಪರೆ ಪ್ರಸಾರ, ಪ್ರಚಾರ, ದಾಖಲಾತಿ ಈ ಎಲ್ಲ ಪ್ರಯತ್ನ ಹಾಗೂ ಸಾಧನೆಗೆ ಅಂತರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವವಾಗಿದೆ ಎಂದು ಕೆರೆಮನೆ ಶಿವಾನಂದ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೆರೆಮನೆ ಯಕ್ಷಗಾನ ಮಂಡಳಿ ಸ್ವಾತಂತ್ಯ ಪೂರ್ವದಲ್ಲಿ 1934ರಲ್ಲಿ ಸ್ಥಾಪನೆಯಾಗಿ ಈಗ 90ನೇ ವರ್ಷದ ಸಂಭ್ರಮದಲ್ಲಿದೆ. ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಮಂಡಳಿಯು ಯಕ್ಷಗಾನ ಪ್ರದರ್ಶನಗಳು, ಗುರುಕುಲದ ಮೂಲಕ ಶಿಕ್ಷಣ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಂತಹ ರಾಷ್ಟ್ರೀಯ ಉತ್ಸವಗಳು, ಸಂಶೋಧನೆ, ಕಾರ್ಯಾಗಾರಗಳು, ಭಾಸಂ, ಪ್ರಾತ್ಯಕ್ಷಿಕೆ, ಅಧ್ಯಯನ ಮತ್ತು ಶಾಲೆಗಳಲ್ಲಿ ಯಕ್ಷಗಾನವನ್ನು ತರುವ “ಆಟವೇ ಪಟ” ಎಂಬ ಉಪಕ್ರಮ ಇವೇ ಮುಂತಾದವುಗಳಲ್ಲಿ ಕಳೆದ 90 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಂಡಳಿಯು ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಸ್ಪೇನ್, ಬಹ್ರೇನ್, ಫ್ರಾನ್ಸ್, ಚೀನಾ, ನೇಪಾಳ ಮೊದಲಾದ ದೇಶಗಳು ಸೇರಿದಂತೆ 9,000 ಪ್ರದರ್ಶನಗಳ ಶ್ರೀಮಂತ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ.