Slide
Slide
Slide
previous arrow
next arrow

ನೌಕರರು ಕೆಲಸದ ಒತ್ತಡದ ನಡುವೆ ಆರೋಗ್ಯ, ಕುಟುಂಬಕ್ಕೆ ಆದ್ಯತೆ ನೀಡಿ:  ಡಿಸಿ ಲಕ್ಷ್ಮಿಪ್ರಿಯಾ

300x250 AD

 ಶಿರಸಿ: ಗ್ರಾಮೀಣ ಪ್ರದೇಶದ ಜನರಿಗೆ ಸರಕಾರದ ಅಗತ್ಯ ಸೌಲಭ್ಯಗಳ ಪೂರೈಕೆ ಹಾಗೂ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುವ ಆರ್‌ಡಿಪಿಆರ್, ಕಂದಾಯ, ಪೋಲಿಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಪ್ರತಿಯೊಬ್ಬ ನೌಕರರು ಜನಸಾಮಾನ್ಯರು ಮತ್ತು ಜನಪ್ರತಿನಿಧಿಗಳ ನಡುವಿನ ಸಂಪರ್ಕಕೊಂಡಿಯಾಗಿ ನಿರಂತರ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ನೌಕರರು ಈ ಎಲ್ಲ ಒತ್ತಡಗಳ ನಡುವೆಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ವ್ಯಾಯಾಮ, ಯೋಗ, ಕ್ರೀಡೆ ಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಹಾಗೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು  ಜಿಲ್ಲಾಧಿಕಾರಿ  ಲಕ್ಷ್ಮೀಪ್ರಿಯಾ ರವರು ಹೇಳಿದರು.

ಅವರು ಶನಿವಾರ  ಶಿರಸಿಯ  ಶ್ರೀ ಮಾರಿಕಾಂಬಾ ಜಿಲ್ಲಾ ಕ್ರಿಡಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ  ಆಯೋಜಿಸಿದ್ದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ  ಮಾತನಾಡಿದರು.

ಸಮಾಜದಲ್ಲಿ  ಮಹತ್ತರ ಬದಲಾವಣೆ ತರುವಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 21ಕ್ಕೂ ಅಧಿಕ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. , ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಒಮ್ಮತದಿಂದ ಪರಸ್ಪರ ಸಮನ್ವಯದಿಂದ   ಕಾರ್ಯನಿರ್ವಹಿಸಿ  ಸಾಮಾನ್ಯ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಮುಟ್ಟಿಸುವಂತಹ  ಕಾರ್ಯಗಳನ್ನು ಮಾಡಿದರೆ ಮಹತ್ತರವಾದ ಸಾಧನೆ ಸಾಧಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದರು. 

ಕೆಲಸದ ನಿರಂತರ ಒತ್ತಡದ ಮದ್ಯೆಯೂ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು.  ತಮ್ಮನ್ನೇ ನಂಬಿಕೊಂಡಿರುವ ಕುಟುಂಬ ವರ್ಗಕ್ಕೂ ಸಮಯ ಮೀಸಲಿಡುವ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಕ್ರೀಡಾಪಟುಗಳಿಗೆ ಕ್ರೀಡಾ ಜೋತಿ ಹಸ್ತಾಂತರಿಸಿ ಮಾತನಾಡಿ, ಅತ್ಯಂತ ವಿಶಾಲವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ನೌಕರರಿಗೆ ಪರಸ್ಪರ ಮುಖಾಮುಖಿ ಭೇಟಿಗೆ ಇಂತಹ ಕ್ರೀಡಾಕೂಟ ಸಹಕಾರಿಯಾಗಿವೆ.  ಇಂತಹ ಕ್ರೀಡಾಕೂಟಗಳ ಪ್ರತಿವರ್ಷ ಎಲ್ಲ ಇಲಾಖೆಗಳಲ್ಲಿ ನಡೆಯುವ ಅವಶ್ಯಕತೆಯಿದೆ. ಕ್ರೀಡಾ ಮನೋಭಾವ ಬೆಳಸಿಕೊಳ್ಳುವುದರಿಂದ ಪ್ರತಿಯೊಬ್ಬರಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ಆರೋಗ್ಯ ವೃದ್ಧಿಯಾಗುವಲ್ಲಿ ಯಾವುದೇ ಸಂಶಯವಿಲ್ಲ  ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಈಶ್ವರ ಕಾಂದೂ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ಆಯೋಜಿಸುವಂತೆ ಕಳೆದ ಮೂರು ತಿಂಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ನಿರಂತರ ಬೇಡಿಕೆಯಿತ್ತು. ಆದರೆ ಚುನಾವಣೆ, ಅತಿವೃಷ್ಠಿ  ಹಿನ್ನಲೆಯಲ್ಲಿ ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್‌ನ ಎಲ್ಲ ಶಾಖೆಗಳ ಮುಖ್ಯಸ್ಥರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಆರ್‌ಡಿಪಿಆರ್ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ನರೇಗಾ, ಎನ್‌ಆರ್‌ಎಲ್‌ಎಂ, ಎಸ್‌ಬಿಎಂ, ಜೆಜೆಎಂ ಸೇರಿದಂತೆ ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕ್ರೀಡಾಕೂಟದ ಪಥಸಂಚಲನ, ಕ್ರೀಡಾ ಜ್ಯೋತಿ, ವೇದಿಕೆ ಕಾರ್ಯಕ್ರಮ ಹಾಗೂ ಕ್ರೀಡೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದನ್ನ ಕಂಡು  ವೈಯಕ್ತಿಕವಾಗಿ ತುಂಬಾ ಸಂತೋಷವಾಗಿದೆ. ಕ್ರೀಡೆ ಎಂದರೆ ಸೋಲು-ಗೆಲವು ಇದ್ದೇ ಇರುತ್ತದೆ. ಆದರೆ ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿದ್ದಲ್ಲಿ  ಪ್ರತಿಯೊಬ್ಬರೂ ವಿಜೇತರೆ ಆಗಿರುತ್ತೀರಿ.  ಸೋಲು-ಗೆಲುವಿನ ಬಗ್ಗೆ ಚಿಂತಿಸದೇ ಪರಸ್ಪರ ಆತ್ಮೀಯತೆಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.

ಇದೇ ವೇಳೆ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಗುರುತಿಸಿ ಜಿಲ್ಲಾ ಪಂಚಾಯತ್‌ನಿಂದ ನೀಡಲಾಗುವ ಬೆಸ್ಟ್ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ ವಿಜೇತ ವಿವಿಧ ಗ್ರಾಮ ಪಂಚಾಯತಿಗಳ ಒಟ್ಟು 16 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲೆಯ 12 ತಾಲ್ಲೂಕು ಪಂಚಾಯತಿಗಳಿಂದ ಸ್ಥಳೀಯ ಸಾಂಸ್ಕೃತಿಕ ಕಲೆ, ವೃತ್ತಿ, ಸಮುದಾಯ ಪ್ರತಿಬಿಂಬಿಸುವ ವೇಷಭೂಷಣ ತೊಟ್ಟ ಅಧಿಕಾರಿಗಳು, ಸಿಬ್ಬಂದಿ ಪಥಸಂಚಲನದಲ್ಲಿ ಭಾಗವಹಿಸಿ ಪ್ರದರ್ಶಿಸಿದರು.

 ಜಿಲ್ಲಾ ಪಂಚಾಯತ್‌ನ ಆಡಳಿತಾ ಹಾಗೂ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಮುಖ್ಯ ಯೋಜನಾಧಿಕಾರಿಗಳು, ಯೋಜನಾ ನಿರ್ದೇಶಕರು(ಡಿಆರ್‌ಡಿಎ), ಆಡಳಿತ ಹಾಗೂ ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿಗಳು, ಎಲ್ಲ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಆರ್‌ಡಬ್ಲ್ಯುಎಸ್ ಹಾಗೂ ಪಿಆರ್‌ಇಡಿ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಂತರರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರು, ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುವ ಸಂಯೋಜಕರು, ಸಮಾಲೋಚಕರು ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top