ಜೋಯಿಡಾ : ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರು ಸೇರಿ ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಜೋಯಿಡಾ ತಾಲೂಕಿನ ರಾಮನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹುಬ್ಬಳ್ಳಿ ಸಾರಿಗೆ ಘಟಕದ ನವಲಗುಂದ – ಪಣಜಿ ಸಂಚರಿಸುವ ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ರಾಮನಗರ ಬಸ್ ನಿಲ್ದಾಣದ ಕ್ಯಾಂಟೀನ್ ಮುಂಭಾಗದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇದೀಗ ಈ ಪ್ರಕರಣ ರಾಮನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕನ ಈ ನಡವಳಿಕೆಯ ಬಗ್ಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಯಾಣಿಕ ಏನೇ ತಪ್ಪು ಮಾಡಿದ್ದರೂ, ಬಸ್ ನಿಲ್ದಾಣದ ಹತ್ತಿರದಲ್ಲೇ ಪೊಲೀಸ್ ಠಾಣೆ ಇರುವುದರಿಂದ, ಠಾಣೆಗೆ ದೂರು ನೀಡಬಹುದಿತ್ತು. ಆದರೆ ಸಾರಿಗೆ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಏಕಾಏಕಿ ಪ್ರಯಾಣಿಕನ ಮೇಲೆ ಹಲ್ಲೆಗೆ ಮುಂದಾಗಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ರಾಮನಗರದ ಪೊಲೀಸರು ಯಾವ ರೀತಿಯ ಕ್ರಮವನ್ನು ಕೈಗೊಳ್ಳಬಹುದು ಎನ್ನುವುದನ್ನು ಕಾದು ನೋಡಬೇಕಾಗಿದೆ.