ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ಸಭಾಭವನದಲ್ಲಿ ನೀತಿ ಆಯೋಗದ ಸಂಪೂರ್ಣತಾ ಅಭಿಯಾನದ ಅಭಿವೃದ್ಧಿ ಆಕಾಂಕ್ಷಿ ತಾಲೂಕಾ ಕಾರ್ಯಕ್ರಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಶಿಶು ಅಭಿವೃದ್ಧಿ ಇಲಾಖೆ,ಇತರ ಇಲಾಖೆಗಳ ಸಹಯೋಗದಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಸಂಯೋಜಕ ಶಿವಂ ನಾಯ್ಕ ಅಭಿವೃದ್ಧಿ ಆಕಾಂಕ್ಷಿ ಕಾರ್ಯಕ್ರಮದ ಕುರಿತು ಅದರ ಉದ್ದೇಶ, ಗುರಿ,ಒಳಗೊಂಡ ವಿಷಯ,ಅನುಷ್ಠಾನ, ಸಮುದಾಯದ ಸಹಭಾಗಿತ್ವ,ಇಲಾಖೆಗಳ ಪಾಲ್ಗೊಳ್ಳುವಿಕೆ, ಇಲಾಖಾವಾರು ವಿವರವಾದ ಮಾಹಿತಿ ನೀಡಿ ವಂದಿಸಿದರು. ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೃಷಿ ಇಲಾಖೆಯ ಸವಲತ್ತುಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುರಿತು ಆರೋಗ್ಯ ಸಹಾಯಕರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ,ಮಗುವಿಗೆ ಅನ್ನ ಪ್ರಾಶನ,ಬಿಪಿ, ಶುಗರ್ ಚೆಕಪ್ ಕ್ಯಾಂಪ್, ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ, ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಶೋಭಾ,ವೈದ್ಯಾಧಿಕಾರಿ ಕಿರಣ ಚವ್ಹಾಣ್,ಗ್ರಾಮ ಪಂಚಾಯತ ಕಾರ್ಯದರ್ಶಿ ಗಜಾನನ ಸಾವರ್ಕರ್,ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಕನ್ಯಾ ದೇಸಾಯಿ,ಭಾರತಿ ಹೆಗಡೆ,ಆರೋಗ್ಯ ಸಹಾಯಕಿ ವಿಜಯಾ ನಾಯ್ಕ,ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ, ಆಶಾ ಕಾರ್ಯಕರ್ತೆಯರು, ಮಾತೆಯರು,ಮಕ್ಕಳು ಉಪಸ್ಥಿತರಿದ್ದರು.