ಶಿರಸಿ: ನಗರದ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಸತ್ತಾತ್ಮಕ ಮಾದರಿಯ ಚುನಾವಣೆ ವ್ಯವಸ್ಥೆ ತಿಳಿಯಲೆಂದು ವಿದ್ಯಾರ್ಥಿ ಸಂಸತ್ತಿಗೆ ಚುನಾವಣಾ ಆಯೋಗದ ನಿಯಮಾವಳಿಗಳಂತೆ ಚುನಾವಣೆಯನ್ನು ನಡೆಸಲಾಯಿತು.
ಯೂನಿಯನ್ ಕಾರ್ಯದರ್ಶಿಯಾಗಿ ಬಿಎ ಅಂತಿಮ ವರ್ಷದ ಸುದೀಪ್ ಮಾಲಿ ಆಯ್ಕೆಯಾದರೆ, ಜಿಮ್ಕಾನಾ ಕಾರ್ಯದರ್ಶಿಯಾಗಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಪವನ್ ಕುಮಾರ್ ದೇವಾಡಿಗ ಆಯ್ಕೆಯಾದರು. ಪ್ರಾಚಾರ್ಯ ಪ್ರೊಫೆಸರ್ ಜಿ.ಟಿ. ಭಟ್ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಎಂ.ಎನ್. ಭಟ್ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕ್ರೀಡಾ ವಿಭಾಗ ಸಂಚಾಲಕ ಆರ್. ವೈ.ಕೊಳೇಕರ್, ಪ್ರೊ.ರಾಘವೇಂದ್ರ ಹೆಗಡೆ ಚುನಾವಣಾ ಆಯೋಗದ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ವಿದ್ಯಾರ್ಥಿಗಳ ಚುನಾವಣಾ ಪ್ರಕ್ರಿಯೆ ಬಿಎ, ಬಿಎಸ್‌ಸಿ ಯ ಆರು ವರ್ಗಗಳಿಗೆ ಮತಗಟ್ಟೆಯನ್ನು ನಿರ್ಮಿಸಿ ಮತದಾನ ಮಾಡಲಾಯಿತು. ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವರ್ಗ, ಶಿಕ್ಷಕೇತರ ಸಿಬ್ಬಂದಿಗಳು ಚುನಾವಣೆ ವ್ಯವಸ್ಥಿತವಾಗಿ ಜರುಗಲು ಸಹಕರಿಸಿದರು. ಪ್ರತಿ ಮತದಾನ ಕೇಂದ್ರದ ಹೊರಗೆ ಎನ್‌ಸಿಸಿ ಕೆಡೆಟ್ಗಳು ಕಾವಲಿಗೆ ನಿಂತಿದ್ದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ತಮ್ಮ ಮತವನ್ನು ಚಲಾಯಿಸಿದರು. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾಚಾರ್ಯರು ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ನೀಡಿದರು.