Slide
Slide
Slide
previous arrow
next arrow

ಅಡಕೆ ಆಮದಿಗೆ ಕೇಂದ್ರದ ಅನುಮತಿ: ವಿವೇಕ್ ಹೆಬ್ಬಾರ್ ಖಂಡನೆ

300x250 AD

ಯಲ್ಲಾಪುರ: ವಿದೇಶದಿಂದ ಅಡಕೆ ಆಮದಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಖಂಡಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ಅಡಕೆಯನ್ನು ಆಮದು ಮಾಡಿಕೊಂಡು, ಸ್ಥಳೀಯ ಅಡಕೆಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಅಡಕೆ ಹಾಗೂ ಬೆಳೆಗಾರರ ಮಾನ ಹರಾಜಾಗಿದೆ. ಕೊಳೆರೋಗ, ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರ ಮೇಲೆ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಸಂಸದರು ರೈತರಿಗೆ ಅನ್ಯಾಯವಾಗುತ್ತಿದ್ದರೂ ಕೇಂದ್ರ ಕೈಗೊಂಬೆಯಂತೆ ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತಂದು, ಆಮದು ಸುಂಕ ಏರಿಸಿ ರೈತರ ರಕ್ಷಣೆಗೆ ಮುಂದಾಗಬೇಕು. ಅಡಕೆ ದರ ಹೀಗೆಯೇ ಇಳಿಮುಖವಾಗುತ್ತ ಹೋದರೆ, ಉಳಿದೆಲ್ಲ ಬೆಳೆಗಾರರಂತೆ ಅಡಕೆ ಬೆಳೆಗಾರರೂ ಆತ್ಮಹತ್ಯೆಯ ದಾರಿ ಹಿಡಿಯುವ ಅಪಾಯವಿದೆ ಎಂದು ಎಚ್ಚರಿಸಿದರು.

300x250 AD

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್ಟ ಮೆಣಸುಪಾಲ ಮಾತನಾಡಿ, ಕರಾವಳಿ, ಮಲೆನಾಡಿನ ಭಾಗದ ಜನರ ನಿತ್ಯದ ಬದುಕಿಗೂ ಸಂಚಕಾರ ತರಬಹುದಾದ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ಕೈಬಿಡಬೇಕು. ಅಡಕೆ ಆಮದು ನಿಯಂತ್ರಿಸಿ, ಸ್ಥಳೀಯ ರೈತರ ರಕ್ಷಣೆಗೆ ಕೇಂದ್ರ ಸರ್ಕಾರ ಧಾವಿಸಬೇಕು. ಸ್ವತಃ ಅಡಕೆ ಬೆಳೆಗಾರರಾಗಿರುವ ನಮ್ಮ ಸಂಸದರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು. ಕಾಂಗ್ರೆಸ್ ಮುಖಂಡ ಡಾ.ರವಿ ಭಟ್ಟ ಬರಗದ್ದೆ ಮಾತನಾಡಿ, ರಾಜ್ಯ ಸರ್ಕಾರಗಳು ತಿರಸ್ಕರಿಸಿದರೂ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಪದೇ ಪದೇ ಒತ್ತಡ ಹೇರುತ್ತಿರುವುದು ದುರದೃಷ್ಟಕರ. ಸಂಸದರು, ಜನಪ್ರತಿನಿಧಿಗಳು ಜನರ ಪರವಾಗಿ ಧ್ವನಿ ಎತ್ತುವುದನ್ನು ಬಿಟ್ಟು ಮೌನ ವಹಿಸಿದ್ದಾರೆ. ಕೇಂದ್ರ ಸರ್ಕಾರದ ಹೇರಿಕೆಯ ನೀತಿ ಕರಾವಳಿ, ಮಲೆನಾಡಿನ ಭಾಗದ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದೆ. ಇದನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ನರ್ಮದಾ ನಾಯ್ಕ, ಪ್ರೇಮಾನಂದ ನಾಯ್ಕ, ಉಲ್ಲಾಸ ಶಾನಭಾಗ, ಲಾರೆನ್ಸ್ ಸಿದ್ದಿ, ವಿ.ಎಸ್.ಭಟ್ಟ, ಪೂಜಾ ನೇತ್ರೆಕರ್, ಸರಸ್ವತಿ ಗುನಗಾ, ವೆಂಕಟರಮಣ ಭಾಗ್ವತ, ಪ್ರಶಾಂತ ಸಭಾಹಿತ ಇತರರಿದ್ದರು.

Share This
300x250 AD
300x250 AD
300x250 AD
Back to top